ಮಡಿಕೇರಿ, ನ. 10: ಧರ್ಮ ಮತಾಂತರಿತ ವ್ಯಕ್ತಿಗಳನ್ನು ಪರಿಶಿಷ್ಟ ಪಂಗಡ ಸೂಚಿಯಿಂದ ತೆಗೆದು ಹಾಕುವುದು ಹಾಗೂ ಅವರಿಗೆ ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಗಿರಿಜನ ಸುರಕ್ಷಾ ವೇದಿಕೆ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿಗಳ ವಿಷಯದಲ್ಲಿ ಯಾವರೀತಿ ಸ್ಪಷ್ಟತೆ ಇದೆಯೋ ಅದೇ ಸ್ಪಷ್ಟತೆ ಪರಿಶಿಷ್ಟ ಪಂಗಡಗಳಿಗೆ ಸಲ್ಲಬೇಕಾದ ವಿಷಯದಲ್ಲಿ ತರಬೇಕು. ಯಾವುದೇ ಪರಿಶಿಷ್ಟ ಪಂಗಡದ ವ್ಯಕ್ತಿ ಕ್ರೈಸ್ತ ಮತ, ಇಸ್ಲಾಂ ಮತವನ್ನು ಅಂಗೀಕರಿಸಿದರೆ ಆ ವ್ಯಕ್ತಿಯನ್ನು ಪರಿಶಿಷ್ಟ ಪಂಗಡದವರನ್ನಾಗಿ ಪರಿಗಣಿಸದೆ ಪರಿಶಿಷ್ಟ ಪಂಗಡಗಳಿಗೆ ಸಲ್ಲುವ ಸೌಲಭ್ಯಗಳಿಂದ ಅನರ್ಹ ಗೊಳಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಅಲ್ಲದೆ 50 ವರ್ಷಗಳ ಹಿಂದಿನಿಂದ ಈ ನಿಟ್ಟಿನಲ್ಲಿ ನಡೆದಿರುವ ಹೋರಾಟ, ಕ್ರಮಗಳ ಬಗ್ಗೆ ಮನವಿಯಲ್ಲಿ ಉಲ್ಲೇಖಿಸ ಲಾಗಿದೆ. ಗಿರಿಜನರು ಮತಾಂತರ ಗೊಳ್ಳುತ್ತಿರುವ ಬಗ್ಗೆ ಅ. 30ರ ‘ಶಕ್ತಿ’ಯಲ್ಲಿ ಬೆಳಕು ಚೆಲ್ಲಲಾಗಿತ್ತು.

ಮನವಿ ಸಲ್ಲಿಕೆ ಸಂದರ್ಭ ಕೊಡಗು ಜಿಲ್ಲಾ ಗಿರಿಜನ ಸುರಕ್ಷಾ ವೇದಿಕೆ ಅಧ್ಯಕ್ಷ ವೈ.ಎಂ. ಪ್ರಕಾಶ್, ಕಾರ್ಯದರ್ಶಿ ಸರೋಜ, ಗಿರಿಜನ ಮುಖಂಡರಾದ ಕೆಂಪ, ಕಾಳ, ಆರ್‍ಎಂಸಿ ಮಾಜಿ ಸದಸ್ಯ ಚಂದ್ರ, ಕೊಲ್ಲಿ ಹಾಡಿಯ ಕಡ್ಡಿ, ತಟ್ಟಳ್ಳಿಯ ಶಂಕರ, ಕಾರೆಕಂಡಿಯ ರವಿ, ಸೀತಾ, ಸವಿತಾ ಇನ್ನಿತರರಿದ್ದರು.