ಪಾಲಿಬೆಟ್ಟ, ನ. 10: ಕಾಡಾನೆ ದಾಳಿಯಿಂದ ಮನೆ ಹಾನಿಯಾಗಿ ಅಗತ್ಯ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿ ಡಿಸೋಜ ಎಂಬವರ ಮನೆಯೊಳಗೆ ಕಾಡಾನೆ ನುಗ್ಗಿ ಹಾನಿ ಪಡಿಸಿದ್ದಲ್ಲದೆ ಆಹಾರ ಪದಾರ್ಥ ಗಳನ್ನು ತಿಂದು ಮನೆಯಲ್ಲಿದ್ದ ವಸ್ತುಗಳನ್ನು ತುಳಿದು ನಾಶ ಮಾಡಿದೆ. 3 ದಿನಗಳು ಕಳೆದರೂ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಕಡೆಗಣಿಸಿದ್ದಾರೆ.

ನಿರಂತರ ಕಾಡು ಪ್ರಾಣಿಗಳ ಭಯದ ನಡುವೆ ಬದುಕು ಸಾಗಿಸುತ್ತಿ ರುವ ಹಾಡಿಯಲ್ಲಿ ಮೂಲಸೌಕರ್ಯ ವಂಚಿತವಾಗಿದ್ದು ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾ ಗಿದ್ದಾರೆ ಎಂದು ಆರೋಪಿಸಿದ ಅವರು, ಹಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿ ರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು, ತನಿಖೆ ಮಾಡುವ ಮೂಲಕ ಹಾಡಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಹಾಡಿಯ ನಿವಾಸಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು. - ಪುತ್ತಂ ಪ್ರದೀಪ್