ಕೂಡಿಗೆ, ನ. 9: ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಭತ್ತವನ್ನು ಬೆಳೆಯುವ ಪ್ರದೇಶವಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿ ಯಿಂದ ಹಾರಂಗಿಯಿಂದ ಕೊಡಗಿನ ಗಡಿ ಭಾಗದ ಗ್ರಾಮವಾದ ಶಿರಂಗಾಲದವರೆಗೆ ವಿವಿಧ ತಳಿಯ ಹೈಬ್ರೀಡ್ ಭತ್ತವನ್ನು ಬೆಳೆಯ ಲಾಗುತ್ತಿದೆ. ಆದರೆ ಮಾರಾಟ ಮಾಡಲು ರೈತರು ಪರದಾಡು ವಂತಾಗಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ತಮ ಗೋದಾಮು ಇರುವುದರಿಂದ ಸರಕಾರ ಭತ್ತದ ಖರೀದಿ ಕೇಂದ್ರವನ್ನು ಡಿಸೆಂಬರ್ ಮೊದಲ ವಾರದಲ್ಲಿಯೇ ತೆರೆದು ಸೂಕ್ತ ಬೆಲೆಯನ್ನು ನೀಡಬೇಕೆಂದು ತಾಲೂಕು ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.ಕಳೆದ ಸಾಲಿನಲ್ಲಿ ರೈತರು ಬೆಳೆದ ಭತ್ತವನ್ನು ಕಟಾವು ಮಾಡಿದ ಎರಡು ತಿಂಗಳ ನಂತರ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಕೇಂದ್ರವು ಪ್ರಾರಂಭವಾಗಲು ತಡವಾದ ಪರಿಣಾಮವಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಭತ್ತದ ಬೆಲೆಯಲ್ಲಿ ಮತ್ತು ತೂಕದಲ್ಲಿ ಅನ್ಯಾಯವಾಗುತ್ತಿದೆ; ಈ ಬಾರಿ ರೈತರಿಗೆ ಅನ್ಯಾಯವಾಗದಂತೆ ಮತ್ತು ಭತ್ತ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಂಬಂಧಿಸಿದ ಕೃಷಿ ಇಲಾಖೆ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿ ಗಳು ಶೀಘ್ರವಾಗಿ ಈ ಸಾಲಿನಲ್ಲಿ ಭತ್ತದ ಕಟಾವಿನ ಸಂದರ್ಭಕ್ಕೆ ಸರಿಯಾಗಿ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

(ಮೊದಲ ಪುಟದಿಂದ) ಸರಕಾರ ನಿಗದಿ ಮಾಡಿದ ಬೆಲೆಯಲ್ಲಿ ರೈತರಿಂದ ಭತ್ತವನ್ನು ಖರೀದಿ ಮಾಡಿ ರೈತರಿಗೆ ಅನ್ಯಾಯವಾಗದಂತೆ ತಡೆಯಲು ಮುಂದಾಗಬೇಕೆಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ, ಹುದುಗೂರು, ಮದಲಾಪುರ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

ಈಗಾಗಲೇ ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೆಲವು ಭಾಗಗಳಲ್ಲಿ ಭತ್ತದ ಬೆಳೆಯು ಕಟಾವುಗೆ ಬಂದಿದೆ; ಆದರೆ ಅರೆಕಾಲಿಕ ಮಳೆಯಿಂದಾಗಿ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುತ್ತಿದ್ದಾರೆ. ಪ್ರಕೃತಿ ವಿಕೋಪದ ನಡುವೆಯೂ ವಿವಿಧ ತಳಿಗಳ ಭತ್ತವನ್ನು ಬೆಳೆಯಲಾಗಿದ್ದು ಬೆಳೆಯು ಕೊಯ್ಲಿಗೆ ಬಂದಿದೆ. ಶೀಘ್ರವಾಗಿ ಕುಶಾಲನಗರ ಹೋಬಳಿ ಕೇಂದ್ರದಲ್ಲಿ ಭತ್ತದ ಖರೀದಿ ಕೇಂದ್ರವನ್ನು ತೆರೆಯುವಂತೆ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ. ಕೃಷ್ಣಗೌಡ, ನಿರ್ದೇಶಕರಾದ ಟಿ.ಕೆ. ಪಾಂಡುರಂಗ, ಹೆಬ್ಬಾಲೆ ಗ್ರಾಮದ ಗಿರೀಶ್ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು ಆಗ್ರಹಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ