ಕುಶಾಲನಗರ, ನ. 9: ಕುಶಾಲನಗರ ಪಟ್ಟಣವನ್ನು ಸ್ವಚ್ಛ ನಗರವನ್ನಾಗಿಸಲು ಪಟ್ಟಣ ಪಂಚಾಯ್ತಿ ದಿನದ 24 ಗಂಟೆಗಳ ಕಾಲ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಕೆಲವೆಡೆ ಜನರ ಅಸಹಕಾರದಿಂದ ಯೋಜನೆ ಯಶಸ್ವಿಯಾಗುವಲ್ಲಿ ಅಡ್ಡಿಯುಂಟಾಗುತ್ತಿದೆ. ಪಟ್ಟಣದಲ್ಲಿ ಬೆಳಗಿನ ಜಾವ 6 ರಿಂದ ಸುಮಾರು 35 ಕ್ಕೂ ಅಧಿಕ ಪೌರಕಾರ್ಮಿಕರು ದಿನನಿತ್ಯ ಕಸ ಸಂಗ್ರಹ ಮತ್ತು ವಿಲೇವಾರಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಕೆಲವು ಜನರು ಮಾತ್ರ ತಮಗೆ ಮನಬಂದಂತೆ ಎಲ್ಲೆಂದರಲ್ಲಿ ಕಸ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಸ್ವಚ್ಛ ಕುಶಾಲನಗರ ಯೋಜನೆಗೆ ತೊಡಕುಂಟಾಗಲು ಪ್ರಮುಖ ಕಾರಣವಾಗಿದೆ.ಪಟ್ಟಣ ಪಂಚಾಯ್ತಿ ವತಿಯಿಂದ ಪ್ರತಿ ಬಡಾವಣೆಗೆ ತೆರಳಿ ಒಟ್ಟು 5 ಆಟೋಗಳು, 3 ಟ್ರಾಕ್ಟರ್ ಹಾಗೂ ಒಂದು ಬೃಹತ್ ಕಾಂಪಾಕ್ಟರ್ ವಾಹನಗಳ ಮೂಲಕ ಕಸ ವಿಲೇವಾರಿಗೆ ಕಾರ್ಮಿಕರು ಶ್ರಮಿಸುತ್ತಿದ್ದು ಹಸಿಕಸ, ಒಣಕಸ ಬೇರ್ಪಡಿಸಿ ಭುವನಗಿರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವುದು ನಿತ್ಯ ಕಾಯಕವಾಗಿದೆ. ಕುಶಾಲನಗರ ಪಟ್ಟಣದಲ್ಲಿ ಅಂದಾಜು 11 ಸಾವಿರ ಜನಸಂಖ್ಯೆ ಹೊಂದಿದ್ದು 7.09 ಟನ್ ಪ್ರಮಾಣದ ಕಸ ತ್ಯಾಜ್ಯ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಪಪಂ ಆರೋಗ್ಯಾಧಿಕಾರಿ ಉದಯಕುಮಾರ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.9 ಚಾಲಕರು, ಲೋಡರ್ಸ್, 6 ಮಹಿಳೆಯರು ಸೇರಿದಂತೆ ನಿತ್ಯ 30 ರಿಂದ 35 ಜನ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಪಟ್ಟಣದ ಸಭಾಂಗಣಗಳು, ಸಮುದಾಯ ಭವನಗಳಲ್ಲಿ ಸಭೆ ಸಮಾರಂಭಗಳು ನಡೆದ ಸಂದರ್ಭ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಸಂದರ್ಭ ಪ.ಪಂ.ನಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.

ಕುಶಾಲನಗರದ ಮಾರುಕಟ್ಟೆ ರಸ್ತೆ, ಗೌಡ ಸಮಾಜ ರಸ್ತೆ, ತಾವರೆಕೆರೆ, ರಥಬೀದಿಯಿಂದ ಪೊಲೀಸ್ ಠಾಣೆಗೆ ತೆರಳುವ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಕೆಲವರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಈ ಬಗ್ಗೆ ಕ್ರಮಕ್ಕೆ ಪಂಚಾಯ್ತಿ ಮುಂದಾಗಿದೆ. ವಾರದಲ್ಲಿ ಎಲ್ಲಾ ದಿನಗಳು ಹಸಿಕಸ ಸಂಗ್ರಹಿಸಲಾಗುತ್ತಿದ್ದು ಬುಧವಾರ ಮತ್ತು ಭಾನುವಾರ ಒಣಕಸ ಸಂಗ್ರಹಿಸಲು ಕಾರ್ಯಯೋಜನೆ ಸಿದ್ದಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಸಂಜೆ 5 ಗಂಟೆಯಿಂದ 7 ಗಂಟೆ ತನಕ ಕಸ ಸಂಗ್ರಹಿಸುವ ವಾಹನಗಳು ಮುಖ್ಯರಸ್ತೆಯಲ್ಲಿ ಕೊಪ್ಪ ಸೇತುವೆ ಬಳಿಯಿಂದ ತಾವರೆಕೆರೆ ತನಕ ತೆರಳಲು ಚಿಂತನೆ ಹರಿಸಲಾಗಿದೆ.

(ಮೊದಲ ಪುಟದಿಂದ) ಈ ಮೂಲಕ ಹಗಲು ವೇಳೆ ವಾಣಿಜ್ಯ ಮಳಿಗೆಗಳಲ್ಲಿ ಸೃಷ್ಟಿಯಾಗುವ ಕಸವನ್ನು ಸಂಗ್ರಹಿಸುವ ಮೂಲಕ ಪಟ್ಟಣದ ಸ್ವಚ್ಛತೆಯಲ್ಲಿ ಸುಧಾರಣೆ ಕಾಣಬಹುದು ಎಂದು ಪಪಂ ಅಧ್ಯಕ್ಷ ಜಯವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗಳು ಸಂಪೂರ್ಣ ಯಶಸ್ಸು ಕಾಣಬೇಕಾದಲ್ಲಿ ಸಾರ್ವಜನಿಕರ ಸಹಕಾರ ಅತಿ ಅಗತ್ಯ ಎಂದು ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ. ಹೊರ ಭಾಗದಿಂದ ಬೈಕ್ ಮತ್ತಿತರ ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ಈ ಬಗ್ಗೆ ರಾತ್ರಿ ಮತ್ತು ಬೆಳಗಿನ ಜಾವ ಪಟ್ಟಣ ಪಂಚಾಯ್ತಿ ಕಾರ್ಮಿಕರು ನಿಗಾ ವಹಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಕಂಡಲ್ಲಿ ಅಂತಹವರ ಮೇಲೆ ಕಾನೂನು ಕ್ರಮದೊಂದಿಗೆ ದಂಡ ವಿಧಿಸಲಾಗುತ್ತದೆ ಎಂದು ಸುಜಯ್‍ಕುಮಾರ್ ತಿಳಿಸಿದ್ದಾರೆ.

ಇದರೊಂದಿಗೆ ಕುಶಾಲನಗರ ಸುತ್ತ ಹರಿಯುತ್ತಿರುವ ಕಾವೇರಿ ನದಿಯನ್ನು ಕಲುಷಿತಗೊಳಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಕೆರೆ ಮತ್ತಿತರ ಜಲಮೂಲಗಳನ್ನು ಕಲುಷಿತಗೊಳಿಸದಂತೆ ಎಚ್ಚರಿಕೆ ಫಲಕಗಳನ್ನು ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ಬಯಲು ಶೌಚಮುಕ್ತವಾಗಿಸಲು ಹಲವೆಡೆ ಫಲಕಗಳನ್ನು ಅಳವಡಿಸಿ ಅರಿವು, ಜಾಗೃತಿ ಮೂಡಿಸಿದರೂ ಪಟ್ಟಣದಲ್ಲಿ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ಎಲ್ಲಾ ಬಯಕೆಗಳನ್ನು ಈಡೇರಿಸಲು ನದಿಯನ್ನೇ ಅವಲಂಬಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಉತ್ತರ ಭಾರತದ ಕೆಲವು ಕಾರ್ಮಿಕರು ಕುಶಾಲನಗರದ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದು ಇವರು ನಿತ್ಯ ಕರ್ಮಗಳನ್ನು ಮುಗಿಸಲು ನದಿ ತಟಗಳಿಗೆ ತೆರಳುತ್ತಿರುವುದು ಕಂಡುಬರುತ್ತಿರುವ ದೃಶ್ಯವಾಗಿದ್ದು ಇಂತಹವರುಗಳ ಮೇಲೆ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರಾದ ಡಿ.ಆರ್.ಸೋಮಶೇಖರ್ ಪಪಂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.