ಮಡಿಕೇರಿ, ನ. 8: ಸಂಘದ ಬೆಳವಣಿಗೆ ಪ್ರತಿಯೊಬ್ಬ ಸಮಾಜಬಾಂಧÀವರು ಒಗ್ಗೂಡಿದಾಗ ಮಾತ್ರ ಸಾಧ್ಯ ಎಂದು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಹೇಳಿದರು.

ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕಚೇರಿ ತಾಳತ್‍ಮನೆಯಲ್ಲಿ ಆಯೋಜಿಸಿದ್ದ ಸಂಘದ 24ನೇ ವಾರ್ಷಿಕ ಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು ಕೇವಲ ಕ್ರೀಡಾಕೂಟದಲ್ಲಿ ಪಾಲ್ಗೊಂಡರೆ ಮಾತ್ರ ಸಂಘದ ಅಭಿವೃದ್ಧಿಯಾಗುವುದಿಲ್ಲ. ಸಂಘದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.

ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಆರೋಗ್ಯ ನಿಧಿ ಆರಂಭಿಸುವ ಚಿಂತನೆ ನಡೆಸಲಾಗಿದೆ. ಪ್ರತಿಯೊಬ್ಬರಿಂದ ಹಣಸಂಗ್ರಹ ಮಾಡಲು ಕಷ್ಟವಾಗಿರುವ ಹಿನ್ನೆಲೆ ಸಂಘದಲ್ಲೇ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಯೊಬ್ಬರು ಒಪ್ಪಿಗೆ ಸೂಚಿಸಿದರು.

ಸಭೆಯನ್ನು ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಬಾಬು ನಾಯ್ಕ್ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜೆ.ಆರ್. ನಾಯಕ್, ಸ್ಥಾಪಕ ಅಧ್ಯಕ್ಷ ವಾಮಾನ ನಾಯ್ಕ್, ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್. ದಿವ್ಯಕುಮಾರ್ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಆಯ್ಕೆ

ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಅವರನ್ನೇ ಮುಂದುವರಿಯುವಂತೆ ಆಡಳಿತ ಮಂಡಳಿ ಹಾಗೂ ಸಮಾಜಬಾಂಧವರು ಸರ್ವಾನುಮತದಿಂದ ಆಯ್ಕೆ ಮಾಡಿದರು. ಹೆಚ್ಚುವರಿಯಾಗಿ ಆಡಳಿತ ಮಂಡಳಿಯ ಸದಸ್ಯರಾಗಿ ಎಂ.ಕೆ.ಸುರೇಶ್, ಎಂ.ಎ. ಪೂವಪ್ಪ, ಎಂ.ಎ. ಐತಪ್ಪ, ರಾಧಕೃಷ್ಣ, ಎಂ.ಎಸ್. ವೆಂಕಪ್ಪ, ಸುಬ್ರಮಣಿಯವರನ್ನು ಆಯ್ಕೆ ಮಾಡಲಾಯಿತು.

ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಸೋಮವಾರಪೇಟೆ ತಾಲೂಕು ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ಕಟ್ಟದ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ ನೆರವೇರಿಸಿದರು. ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ್ ಮಾತನಾಡಿದರು.