ಸೋಮವಾರಪೇಟೆ, ನ. 8: ಆರತಕ್ಷತೆಯ ದಿನದಂದು ವಧೂವರರು ತಮ್ಮ ದೇಹದಾನದ ಪ್ರತಿಜ್ಞೆ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರಪೇಟೆ ಕಿರಗಂದೂರು ಗ್ರಾಮದ ವಿ.ಟಿ. ಮುತ್ತಪ್ಪ-ಬೋಜಮ್ಮ ದಂಪತಿ ಪುತ್ರ ಗೌತಮ್ ಹಾಗೂ ಅರಕಲಗೂಡಿನ ಸುಮನ ಅವರುಗಳ ಆರತಕ್ಷತೆ ನಡೆದ ಸಂದರ್ಭ ಮರಣಾನಂತರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ತಮ್ಮ ದೇಹಗಳನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಒಕ್ಕಲಿಗರ ಸಮುದಾಯ ಭವನದಲ್ಲಿ ಕೆಲವೇ ಕೆಲವು ಆಹ್ವಾನಿತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತ್ರದಾನದ ಜಾಗೃತಿ ಅಭಿಯಾನ, ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಸಸಿಗಳ ವಿತರಣೆಯೂ ನಡೆಯಿತು.

ಮದುವೆಯ ದಿನದಂದು ನಡೆದ ಪ್ರತಿಜ್ಞೆಗೆ ವಧೂವರರ ಪೋಷಕರು ಸಮ್ಮತಿ ಸೂಚಿಸಿ ಸಹಿ ಹಾಕುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಇದರೊಂದಿಗೆ ಸುಮನ ಅರಕಲಗೂಡು ರಚಿತ ‘ಪರಿಣಯ’ ಕವನಸಂಕಲನದ ಬಿಡುಗಡೆ ನಡೆಯಿತು.

ಕವನ ಸಂಕಲನ ಬಿಡುಗಡೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಉದ್ಯಮಿ, ಸೇವಾರತ್ನ ಪ್ರಶಸ್ತಿ ಪುರಸ್ಕøತ ಹರಪಳ್ಳಿ ರವೀಂದ್ರ, ಅಂತರರಾಷ್ಟ್ರೀಯ ಕಿಕ್ ಬಾಕ್ಸರ್ ಫೈಟರ್ ಗಿರೀಶ್ ಆರ್.ಗೌಡ, ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ಹಾಸನ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಾಮಾಲಾ, ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ, ಅರಕಲಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಲ್. ವಿಷ್ಣುಪ್ರಕಾಶ್, ಸಾಹಿತಿಗಳಾದ ಪಿ.ಎಸ್. ವೈಲೇಶ್ ಅವರುಗಳು ಭಾಗವಹಿಸಿದ್ದರು.

ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗಶಾಸ್ತ್ರ ವಿಭಾಗದ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಅವರು ದೇಹದಾನದ ಮಹತ್ವದ ಬಗ್ಗೆ ವಿವರಿಸಿದರು. ಮಡಿಕೇರಿಯ ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಿರಣ್‍ಭಟ್ ಅವರು ನೇತ್ರದಾನದ ಮಹತ್ವ, ನೇತ್ರದಾನ ಮಾಡುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.