*ಗೋಣಿಕೊಪ್ಪಲು, ನ. 7: ರೂ.66.76 ಲಕ್ಷ ಲಾಭಗಳಿಂದ ಕಾನೂರು ಕೃಷಿಪತ್ತಿನ ಸಹಕಾರ ಸಂಘ 2019-20ರ ಸಾಲಿನಲ್ಲಿ ಅಭಿವೃದ್ಧಿಯತ್ತ ಸಾಗಿದೆ ಎಂದು ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ತಿಳಿಸಿದ್ದಾರೆ.

ಕಾನೂರು ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 1937ರಲ್ಲಿ ಸ್ಥಾಪನೆಯಾದ ಸಂಘ 83 ವರ್ಷಗಳನ್ನು ಪೂರೈಸಿ ಸ್ಥಳೀಯರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಸಂಘವು 1551 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳವಾಗಿ ಒಂದು ಕೋಟಿ ಎಂಬತ್ತು ಲಕ್ಷದ ಐನೂರ ಐವತ್ತು ರೂಪಾಯಿಗಳನ್ನು ಹೊಂದಿದೆ. ನಿರಖು ಠೇವಣೆ, ಪಿಗ್ಮಿ ಠೇವಣೆ ಮತ್ತು ಸಿಬ್ಬಂದಿ ಠೇವಣೆ ಸೇರಿದಂತೆ ನಾಲ್ಕು ಕೋಟಿ ಐವತ್ತೆಂಟು ಲಕ್ಷದ ಎರಡು ಸಾವಿರದ ಎಂಟು ನೂರ ಎಂಬತ್ತೆಂಟು ರೂಪಾಯಿಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಸಂಘದ ಕಟ್ಟಡ ನಿಧಿ ಹಾಗೂ ಇತರ ನಿಧಿಗಳಿಂದ ಒಂದು ಕೋಟಿ ಎಪ್ಪತ್ತೆರಡು ಲಕ್ಷದ ನಲುವತ್ತೊಂದು ಸಾವಿರದ ಎಳುನೂರ ಮೂವತ್ತೈದು ರೂಪಾಯಿಗಳು ಹೊಂದಿದ್ದು, ಕ್ಷೇಮನಿಧಿಯಾಗಿ ಎರಡು ಕೋಟಿ ಅರುವತ್ತೆಂಟು ಲಕ್ಷದ ಆರು ಸಾವಿರದ ಐದುನೂರ ಹದಿನೆಂಟು ಇದೆ. ಹಾಗೆಯೇ ಜಿಲ್ಲಾ ಬ್ಯಾಂಕಿನಲ್ಲಿ ಕ್ಷೇಮನಿಧಿಯಾಗಿ ಎರಡು ಕೋಟಿ ಎಪ್ಪತ್ಮೂರು ಲಕ್ಷದ ನಲುವತೈದು ಸಾವಿರದ ತೊಂಬತ್ತ ನಾಲ್ಕು ರೂಪಾಯಿಗಳು ಪಾವತಿಯಾಗಿದೆ. ಕಾಫಿ ತೋಟದ ಬಂಡವಾಳ ಮತ್ತು ಅಭಿವೃದ್ದಿ ನಿಧಿ ಎಂದು ಒಂದು ಕೋಟಿ ಮೂವತ್ತು ಲಕ್ಷ ಲಾಭಗಳಿಸಿದೆ ಎಂದು ತಿಳಿಸಿದರು.

474 ಸದಸ್ಯರಿಗೆ ಸಂಘವು ಕೆ.ಸಿ.ಸಿ. ಬ್ಯಾಂಕ್ ಫಸಲು ಸಾಲದಲ್ಲಿ ಎಂಟು ಕೋಟಿ ಐದು ಲಕ್ಷದ ಮೂವತ್ತೈದು ಸಾವಿರ ರೂಪಾಯಿಗಳನ್ನು 123 ಗ್ರಾಹಕರಿಗೆ ಹನ್ನೊಂದು ಲಕ್ಷದ ಎಂಬತೇಳು ಸಾವಿರ ಜಾಮೀನು ಸಾಲ, 58 ಜನರಿಗೆ ಇಪ್ಪತ್ತೊಂಬತು ಲಕ್ಷದ ತೊಂಬತ್ತು ಸಾವಿರ, ಸ್ವಸಹಾಯ ಗುಂಪು ಸಾಲವಾಗಿ ಐದು ಲಕ್ಷ ಹಾಗೂ ನಿರಖು ಠೇವಣಿ ಸಾಲ ಆರು ಲಕ್ಷದ ತೊಂಬತ್ತೊಂಬತ್ತು ಸಾವಿರದ ನೂರು ರೂಪಾಯಿಗಳ ಸಾಲ ನೀಡಲಾಗಿದೆ.

ಜಿಲ್ಲಾ ಸಹಕಾರ ಸಂಘದ ಬ್ಯಾಂಕಿನಿಂದ ಎರಡು ಕೋಟಿ ತೊಂಬತ್ತೆರಡು ಲಕ್ಷದ ಎಂಬತ್ತಾರು ಸಾವಿರ ಸಾಲವನ್ನು ಪಡೆದುಕೊಳ್ಳಲಾಗಿದೆ ಒಟ್ಟು ಎಂಟು ಕೋಟಿ ಐವತ್ತೊಂಬತ್ತು ಲಕ್ಷದ ಹನ್ನೊಂದು ಸಾವಿರದ ನೂರು ರೂಪಾಯಿಗಳನ್ನು ಸದಸ್ಯರಿಗೆ ಸಾಲವಾಗಿ ನೀಡಿರುತ್ತೇವೆ.

ಕಳೆದ ಸಾಲಿನಲ್ಲಿ ರೈತರು ಪಡೆದ ಕೆ.ಸಿ.ಸಿ. ಸಾಲ ಜುಲೈ ಹಂತಕ್ಕೆ ಶೇ. 100ರಷ್ಟು ಮರುಪಾವತಿಯಾಗಿದೆ ಎಂದು ಹೇಳಿದರು. ಸಂಘದಲ್ಲಿ ಸದಸ್ಯರಿಗೆ ಅವಶ್ಯವಿರುವ ಕ್ರಿಮಿನಾಶಕ ಗೊಬ್ಬರ, ಹತ್ಯಾರು, ದಿನಬಳಕೆಯ ವಸ್ತು, ಕೋವಿತೋಟ, ಒದಗಿಸಿಕೊಡಬೇಕೆಂದು ಸದಸ್ಯರಿಗೆ ಪಾಲುಬಂಡವಾಳದ ಮೇಲೆ ಶೇ. 25ರಷ್ಟು ಡಿವಿಡೆಂಟ್ ಫಂಡ್ ಪಾವತಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಸರಕಾರದಿಂದ ಐವತ್ತು ಎಕರೆ ಕಾಫಿ ತೋಟವನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಸಂಘದ ಆದಾಯದ ಮೂಲವಾಗಿ ಕಂಡುಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಭಿವೃದ್ಧಿಯ ವಹಿವಾಟುಗಳ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕುಂಞಮಾಡ ಸಿ. ಮುತ್ತಪ್ಪ, ನಿರ್ದೇಶಕರುಗಳಾಗಿ ಕಾಡ್ಯಮಾಡ ಎಸ್. ಭರತ್, ಎಸ್.ಬೋಪಣ್ಣ, ಚಿರಿಯಪಂಡ ಬೆಳ್ಯಪ್ಪ, ಕೆ.ಆರ್. ಸುರೇಶ್, ಮನ್ನಕ್ಕಮನೆ ಕೆ. ರವಿ, ಮನ್ನಕ್ಕಮನೆ ಪ್ರಕಾಶ್, ಎನ್.ಆಶ್ವಿನಿ, ಕೇಚಮಾಡ ನಿರ್ಮಲ, ಪೆÇೀರಂಗಡ ಲೀನಾ, ಎಂ.ಎಂ. ಜಗನ್ನಾಥ್, ಹೆಚ್.ಕೆ. ಬೊಗ್ಗುರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್. ಉಮೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

-ಎನ್.ಎನ್. ದಿನೇಶ್