4.39 ಕೋಟಿ ಪಡಿತರ ಚೀಟಿ ರದ್ದು

ನವದೆಹಲಿ, ನ. 7: ಕೇಂದ್ರ ಸರ್ಕಾರ 2013 ರಿಂದ ಎನ್‍ಎಫ್‍ಎಸ್‍ಎ ಅಡಿಯಲ್ಲಿ ಈವರೆಗೂ 4.39 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಈ 4.4 ಕೋಟಿ ಪಡಿತರ ಕಾರ್ಡ್‍ಗಳು ಇನ್ನು ಮುಂದೆ ರದ್ದಾಗಲಿವೆ. ಕಳೆದ ಏಳು ವರ್ಷಗಳಿಂದ ಪಡಿತರ ವ್ಯವಸ್ಥೆಯ ಅವ್ಯವಹಾರ ನಿಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದ್ದು ಮೃತಹೊಂದಿದ ವ್ಯಕ್ತಿಗಳ ಕಾರ್ಡ್‍ಗಳನ್ನು ಸಹ ತೆಗೆದು ಹಾಕಲಾಗಿದೆ. ಆಧಾರ್ ಕಾರ್ಡ್‍ನೊಂದಿಗೆ ಜೋಡಿಸದ ಪಡಿತರ ಚೀಟಿಗಳು ಸಹ ಕಾರ್ಯನಿರ್ವಹಿಸುವುದಿಲ್ಲ' ಎಂದು ಕೇಂದ್ರ ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರದಲ್ಲಿ ಅತಂತ್ರ ವಿಧಾನಸಭೆ !

ಪಾಟ್ನಾ, ನ. 7: ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದ್ದು, ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ. ಹಲವು ಸಮೀಕ್ಷೆಗಳ ಪ್ರಕಾರ, ಬಿಹಾರ ಮತದಾರ ಈ ಬಾರಿಯೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಇರುವುದರಿಂದ ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ. ಆದರೆ ತೇಜಶ್ವಿ ಯಾದವ್ ನೇತೃತ್ವದ ಮಹಾಘಟ್ ಬಂಧನ್ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು

ಬೆಂಗಳೂರು, ನ. 7: ಕೊರೊನಾ ಆತಂಕದ ನಡುವೆಯೂ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಶನಿವಾರ ಪ್ರಕಟವಾಗಿದ್ದು, ಆರ್‍ಆರ್ ನಗರ ಹಾಗೂ ಶಿರಾದಲ್ಲೂ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಿ ವೋಟರ್ ಸಮೀಕ್ಷೆ ತಿಳಿಸಿದೆ.

ಶಾಸಕ ಎಂ.ಸಿ. ಕಮರುದ್ದೀನ್ ಬಂಧನ

ಕಾಸರಗೋಡು, ನ. 7: ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್‍ನಿಂದ ಸರಣಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಕೇರಳದ ಮಂಜೇಶ್ವರ ಕ್ಷೇತ್ರದ ಐಯುಎಂಎಲ್ ಶಾಸಕ ಎಂ.ಸಿ. ಕಮರುದ್ದೀನ್ ರನ್ನು ಅಲ್ಲಿನ ರಾಜ್ಯ ಅಪರಾಧ ವಿಭಾಗದ ಪೆÇಲೀಸರು ಶನಿವಾರ ಬಂಧಿಸಿದ್ದಾರೆ. ಈಗಾಗಲೇ ಇಂಡಿಯನ್ ಯೂನಿಯನ್ ಮುಸ್ಲೀಂಲೀಗ್ (ಐಯುಎಂಎಲ್) ಕಮರುದ್ದೀನ್ ರಾಜೀನಾಮೆಯನ್ನು ಪಡೆಯಲು ನಿರ್ಧರಿಸಿದೆ. ಶಾಸಕ ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್‍ನ ಅಧ್ಯಕ್ಷರಾಗಿದ್ದು, ಅವರು ಗುಂಪಿನ ನೂರಾರು ಹೂಡಿಕೆದಾರರಿಗೆ ರೂ. 100 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.