ಮಡಿಕೇರಿ, ನ.7: ಕೊಡಗು ಜಿಲ್ಲಾ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು, ತಮ್ಮ ಮನೆಯ ಬಾಗಿಲನ್ನು ಮೊದಲು ಗಟ್ಟಿ ಮಾಡಿಕೊಂಡು ನಂತರ ಇತರ ಪಕ್ಷದವರ ಬಗ್ಗೆ ಮಾತನಾಡಲಿ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಜನತಾದಳವನ್ನು ಮತೀಯ ಪಕ್ಷವೆಂದು ಹೇಳಿಕೆ ನೀಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಯಾವುದೇ ನೈತಿಕತೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಎಲ್ಲೂ ಕಾಣಿಸಿಕೊಳ್ಳದೆ ಮರದ ಪೊಟರೆಯೊಳಗೆ ಇದ್ದಂತೆ ಇದ್ದು, ಎಲ್ಲಾ ಮುಗಿದ ಮೇಲೆ ಹೊರ ಬಂದು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ಖಂಡನೀಯ ವೆಂದರು.

ಕಾಂಗ್ರೆಸ್‍ನ ಮುಂದೆ ಮೈತ್ರಿಗಾಗಿ ಕೈ ಚಾಚುವ ಅಗತ್ಯ ಜೆಡಿಎಸ್‍ಗಿಲ್ಲ. ಮೀಸಲಾತಿಯಡಿ ಅಗತ್ಯ ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯಲು ಅವಕಾಶವಿದ್ದರೂ ಆ ಪಕ್ಷದ ಜಿಲ್ಲಾಧ್ಯಕ್ಷರು ಒಂದೇ ಒಂದು ದಿನ ಜೆಡಿಎಸ್‍ನೊಂದಿಗೆ ಮಾತುಕತೆ ನಡೆಸಿಲ್ಲ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಆಸಕ್ತಿ ತೋರದ ಮಂಜುನಾಥ್ ಕುಮಾರ್ ಅವರು ತಮ್ಮ ವೈಫಲ್ಯವನ್ನು ಮರೆ ಮಾಚಲು ಜೆಡಿಎಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಗಣೇಶ್ ಆರೋಪಿಸಿದರು.

ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವುದಕ್ಕಾಗಿ ಜಾತ್ಯತೀತ ಜನತಾ ದಳವನ್ನು ಟೀಕಿಸುವ ಅಗತ್ಯವಿಲ್ಲ. ಜಿಲ್ಲೆಯ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಎದುರಾದಾಗಲೂ ಜೆಡಿಎಸ್ ಮುಂದೆ ನಿಂತು ಧೈರ್ಯ ತುಂಬಿದೆ. ಅಲ್ಲದೆ, ಸಮಸ್ಯೆಗಳಿಗೆ ಸ್ಪಂದಿಸಿದೆ. ಜೆಡಿಎಸ್‍ನ್ನು ಮತೀಯ ಪಕ್ಷವೆಂದು ಹೇಳಿಕೆ ನೀಡಿರುವ ಮಂಜುನಾಥ್ ಕುಮಾರ್ ಅವರು ತಮ್ಮ ಮಾತನ್ನು ವಾಪಾಸ್ ಪಡೆಯಬೇಕೆಂದು ಗಣೇಶ್ ಒತ್ತಾಯಿಸಿದರು.

ರಾಜ್ಯದಲ್ಲಿರುವಂತೆ ಕೊಡಗಿನಲ್ಲು ಬಿಜೆಪಿ, ಕಾಂಗ್ರೆಸ್ ಮೈತ್ರಿ ಆಡಳಿತ ನಡೆಯುತ್ತಿದ್ದು, ಇದು ಬಹಿರಂಗ ಸತ್ಯವಾಗಿದೆ. ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಅಧಿಕಾರಕ್ಕಾಗಿ ಯಾವುದೇ ಮಾರ್ಗವನ್ನು ಹಿಡಿಯಲು ಸಿದ್ಧವೆಂದು ಕುಶಾಲನಗರ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಸಾಬೀತು ಪಡಿಸಿದೆ ಎಂದು ಆರೋಪಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮನೋಜ್ ಬೋಪಯ್ಯ ಮಾತನಾಡಿ, ಕೈಯಲ್ಲಿ ಆಗದವರು ಮೈಪರಚಿಕೊಂಡ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಇದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ವಿ.ಪಿ.ಶಶಿಧರ್ ಅವರನ್ನು ಬಿಟ್ಟರೆ ಬೇರೆ ಯಾರೂ ಜನಪರವಾಗಿ ಹೋರಾಟ ನಡೆಸುತ್ತಿಲ್ಲ. ಆದರೆ, ಆ ಪಕ್ಷ ಅವರಿಗೆ ಸ್ಥಾನಮಾನ ವನ್ನು ನೀಡದೆ ವಂಚಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಹಾಗೂ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಷೀರ್ ಉಪಸ್ಥಿತರಿದ್ದರು.