ಭಾರತೀಯ ಸಂಸ್ಕøತಿಯ ತಾಯಿ ಬೇರು ‘ವೇದ’ ಎಂಬದು ಸಾರ್ವಕಾಲಿಕ ಸತ್ಯ ವಿಚಾರ. ವೇದಗಳು ಮತ್ತು ನಂತರದ ಧಾರ್ಮಿಕ ಸಾಹಿತ್ಯದಲ್ಲಿ ನಾನಾ ಪದಗಳಿವೆ. ಈ ಹೊತ್ತು ವೇದ ವಾಙ್ಮಯವು ಇಂದಿನ ರೂಪ ತಾಳಲು ಹಲವಾರು ವರ್ಷಗಳಾಗಿವೆ. ಇಂದ್ರ ಅಗ್ನಿ, ವಾಯು, ಮುಂತಾದ ಪ್ರಾಕೃತಿಕ ಶಕ್ತಿಗಳ ಆರಾಧನೆಯಿಂದ ಮೊದಲ್ಗೊಂಡು ನಾನಾ ರೀತಿಯ ಯಾಗಗಳನ್ನು ನಡೆಸುವುದರ ಜೊತೆಗೆ ಉಪನಿಷತ್ತುಗಳು, ಜೀವ ತತ್ವ ಬ್ರಹ್ಮ ತತ್ತ್ವಗಳ ಬಗ್ಗೆ ನಾನಾ ಋಷಿ ಮುನಿಗಳ ಆಲೋಚನೆಗಳು, ಚರ್ಚೆಗಳು, ಸಿದ್ದಾಂತಗಳು ಕಾಲಕ್ರಮೇಣ ಬೆಳೆದು ಬಂದಿವೆ. ಅವುಗಳ ಜೊತೆಗೆ ನಾನಾ ರೀತಿಯ ಧರ್ಮ ಸೂತ್ರಗಳು, ಗೃಹ ಸೂತ್ರಗಳು ಸ್ಮøತಿ ನಿಬಂಧನೆಗಳು ವಿಧಿ ವಾಕ್ಯಗಳೂ ಸೇರಿವೆ. ಈ ಶೃತಿ, ಸ್ಮøತಿಗಳನ್ನು ಅವಲಂಬಿಸಿಕೊಂಡು ರಾಮಾಯಣ, ಮಹಾಭಾರತಗಳು, ಜನಜೀವನವನ್ನು ಪರಿಷ್ಕಾರಗೊಳಿಸಿವೆ. ವೇದದ ಅಂಗಗಳಾಗಿ ಅಭಿವೃದ್ಧಿ ಪಡೆದ ಶಿಲ್ಪ ಸಂಗೀತ ಗಳೂ ಕಲೆಗಳೂ ಜನಸಾಮಾನ್ಯರ ಮನೋವೃತ್ತಿಗಳನ್ನು ಸಂಸ್ಕಾರಗೊಳಿಸುತ್ತಾ ಬಂದಿವೆ. ಶೃತಿ ಸ್ಮøತ್ಯಾದಿಗಳಿಂದ ಪ್ರತ್ಯೇಕವಾದ ಕೇವಲ ಸಾಮಾಜಿಕ ಶಕ್ತಿಗಳೂ ಅವುಗಳಿಂದ ಹುಟ್ಟಿದ ಪ್ರಶ್ನೆಗಳೂ ತೊಡಕುಗಳೂ, ಇತಿಹಾಸಗಳಲ್ಲಿಯೂ, ಪುರಾಣಗಳಲ್ಲಿಯೂ, ಕಾವ್ಯಗಳಲ್ಲಿಯೂ ರೂಪುಗೊಂಡಿವೆ.
ಪ್ರಾಚೀನ ಸಂಪ್ರದಾಯಗಳು ಮತ್ತು ನೂತನ ಪ್ರಶ್ನೆಗಳ ಪರಸ್ಪರ ಸಂಘರ್ಷಣೆಯಿಂದ ಹೊಸರೂಪ, ನೀತಿ-ಚಿಂತನೆಗಳು ಉದಿಸಿ ರೂಢಿಗೆ ಬಂದಿವೆ. ಹೀಗೆ ವೇದ, ಧರ್ಮಶಾಸ್ತ್ರ ಇತಿಹಾಸ, ಪುರಾಣ, ಕಾವ್ಯ, ಶಿಲ್ಪ, ಸಂಗೀತಾದಿ ಕಲೆ ಸಮಾಜದ ಸಮಯಾಚಾರಗಳು, ಪೂರ್ವಪದ್ಧತಿಗಳು, ಶಿಷ್ಟಜನರ ಮರ್ಯಾದೆ ಇವಿಷ್ಟೂ ಸೇರಿ ಹಿಂದೂ ಸಂಸ್ಕøತಿಯ ಮೂಲ ಸಾಮಗ್ರಿಯಾಗಿದೆ. ಈ ಮೂಲ ಸಂಸ್ಕøತಿಯ ಆವರಣದೊಳಗೆ ನಾನಾ ಸ್ಥಳೀಯ ವರ್ಗೀಯ ಸಂಸ್ಕøತಿಗಳೂ ಹುಟ್ಟಿಕೊಂಡಿವೆ.
ಭಾರತವು ಬಹು ವಿಶಾಲ ಪ್ರದೇಶವಾಗಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿದೆ. ಹೀಗೆ, ಏಕತೆಯನ್ನು ಹೊಂದಬೇಕಾದರೆ, ಸಮಗ್ರ ಭಾರತವನ್ನು ಒಂದೇ ಆಗಿ ಹಿಡಿದಿಟ್ಟುಕೊಳ್ಳಲು ‘ಧರ್ಮ’ ಬೇಕಾಯಿತು. ಧರ್ಮಕ್ಕೆ ಆಧಾರ ಮೊದಲಿನ ವಾಕ್ಯ ಖಂಡದಲ್ಲಿ ಹೇಳಿದ ವಿವರಗಳೇ ಆಗಿವೆ. ಆ ವಿವರಗಳ ಆಧಾರದಿಂದ ಹಲವಾರು ವರ್ಷಗಳ ಕಾಲ ಹಲವಾರು ಋಷಿಮುನಿಗಳು, ವಿದ್ವಜ್ಜನರು ಸ್ವಾರ್ಥರಹಿತವಾಗಿ, ಪ್ರಚಾರ ರಹಿತರಾಗಿ ಪ್ರಯೋಗವನ್ನೇ ಗುರಿಯಾಗಿಟ್ಟುಕೊಂಡು ಮತ್ತೆ ಕೆಲವಾರು ವರ್ಷಗಳ ಕಾಲ ಪ್ರಯೋಗ ನಡೆಸಿ ‘ಇದು ಹೀಗೆಯೇ ಸರಿ; ಇದು ಹೀಗೆಯೇ ಇರಬೇಕು’ ಎಂಬ ನಿರ್ಧಾರಕ್ಕೆ ಬಂದರು. ಹೀಗೆ ಜನಸಾಮಾನ್ಯರು ನಡೆದುಕೊಳ್ಳಬೇಕಾದ ವಿಚಾರದಲ್ಲಿ ಋಷಿಗಳ ಅನುಭವ ಸ್ವಾರ್ಥರಹಿತ ತ್ಯಾಗಯುಕ್ತ ಪರ ರಹಿತಸಾಧನೆಯ ಜೀವನ ಕ್ರಮವೇ ಧರ್ಮ ಎನಿಸಿತು. ಇದಕ್ಕೆ ವಿರುದ್ಧವಾಗಿ ನಡೆದಾಗ ಅದು ಅಧರ್ಮ ಎನಿಸಿತು. ಅಧರ್ಮವಾಗಿ ನಡೆದರೆ ಅದು ಪಾಪ, ಹಾಗೆ ನಡೆಯಬಾರದು ಎಂಬದನ್ನು ಜನಸಾಮಾನ್ಯರು ಒಪ್ಪಿಕೊಂಡರು. ಕಾಲಕ್ರಮೇಣ ಈ ರೀತಿಯ ಧಾರ್ಮಿಕ ನಡತೆಯನ್ನು ‘ಸಂಸ್ಕøತಿ’ ಎಂದು ಜನಸಾಮಾನ್ಯರು ಒಪ್ಪಿಕೊಂಡರು. ಕಾಲಕ್ರಮೇಣ ಈ ರೀತಿಯ ನಡವಳಿಕೆ, ಜೀವನಕ್ರಮ ದೇಶಕ್ಕೆ ಭದ್ರತೆ ನೀಡಿತು.
ಭಾರತೀಯ ಸಂಸ್ಕøತಿಯ ಅಂತಸ್ಸಾರವೆಂಬುದು ಆತ್ಮವಸ್ತುವಿನ ಪರಮೋತ್ಕøಷ್ಟತೆ, ಭಾರತವನ್ನು ಅವಲಂಬಿಸಿರುವ ಮತ್ತು ಅವಲಂಬಿಸಿ ಕೊಂಡಿರಬೇಕಾದ ರಾಷ್ಟ್ರಗಳ ಜೊತೆಗಿರಬೇಕಾದ ಬಂಧುತ್ವ ಮತ್ತು ಎಲ್ಲಾ ಹೊಂದಾಣಿಕೆಯಾಗಿ ನಮ್ಮದೇ ಆದಂತಹ ಧರ್ಮಾಚರಣೆ, ಈ ರೀತಿಯ ಧರ್ಮಾಚರಣೆ ಅನುಸರಿಸಬೇಕಾದ ಅನೇಕಾನೇಕ ಗ್ರಂಥಗಳಿವೆ. ವೇದಗಳು, ಶಾಸ್ತ್ರಗ್ರಂಥಗಳು, ಮಂತ್ರ ಸಂಹಿತೆಗಳು, ಬ್ರಾಹ್ಮಣಕಗಳು, ಉಪನಿಷತ್‍ಗಳು, ಬ್ರಹ್ಮಸೂತ್ರಗಳು, ಶೃತಿ ಸ್ಮøತಿಗಳು, ರಾಮಾಯಣ, ಮಹಾಭಾರತ, ಮಹಾಭಾರತದೊಳಗಿನ ಭಗವದ್ಗೀತೆ, ಅನೇಕಾನೇಕ ಪುರಾಣಗಳು, ಇಲ್ಲಿ ಕಾಣಿಸಿರುವ ಗ್ರಂಥಗಳೆಲ್ಲವೂ ಪ್ರಾಮಾಣಿಕ ಗ್ರಂಥಗಳೇ ಆದರೂ ಎಲ್ಲಾ ಗ್ರಂಥಗಳನ್ನು ಎಲ್ಲರೂ ಓದಿ ಅರ್ಥಮಾಡಿಕೊಳ್ಳಲಾರರು. ಮಾತ್ರವಲ್ಲ ಅನುಕರಿಸಲು ಕಷ್ಟವೂ ಆಗಬಹುದು. ಅಥವಾ ಸಾಧ್ಯವೇ ಆಗದಿರಬಹುದು. ಆದುದರಿಂದ ಇಂತಹ ಜನಸಾಮಾನ್ಯರಿ ಗೆಂದು ರಚನೆ ಆದದ್ದು ಪುರಾಣಗಳು. ಪುರಾಣಗಳಲ್ಲಿ ಪ್ರಾಪಂಚಿಕ ಸತ್ಯಪ್ರತಿಬಿಂಬಿತವಾಗಿರುತ್ತದೆ. ವೇದೋಪನಿಷತ್ತ್ ಗಳಲ್ಲಿ ಸ್ಮøತಿಗಳಲ್ಲಿ, ಇತಿಹಾಸಗಳಲ್ಲಿ, ಪ್ರತಿಪಾದಿಸಿ ರುವ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಯು ವಂತೆ ಹೇಳುವುದು ಪುರಾಣಗಳ ಉದ್ದೇಶವಾಗಿದೆ.
ವರ್ಣನೆ, ಉಪಕಥೆಗಳು, ರಾಜರ, ದೇವತೆಗಳ ಸಾಹಸ ಕಥೆಗಳು, ಸಂತರ ಜೀವನ ವೃತ್ತಾಂತಗಳು, ಧರ್ಮಾನುಷ್ಠಾನ ವಿವರಣೆ, ಲೋಕೋದ್ಧಾರಕ್ಕಾಗಿ ಭಗವಂತನ ದಶಾವತಾರಗಳು, ಅವುಗಳ ವರ್ಣನೆ ಭಗವಂತನ ಅವತಾರದ ವಿವರಣೆಗಳು ಮುಖ್ಯ ಉದ್ದೇಶ ದುಷ್ಟರ, ನಾಶ, ಶಿಷ್ಟರ ಉದ್ಧಾರ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಿತಿ ಕಾಪಾಡುವ ಬಗ್ಗೆ ವಿವರಣೆಗಳು, ಆಧ್ಯಾತ್ಮದ ಬಹಳ ಗಹನವಾದ ವಿಚಾರಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ತಲಪಿಸುವುದು. ಪುರಾಣದಲ್ಲಿ ಭಗವಂತನು ಮಾನವನ ವಿಕಾಸದ ಹಾದಿಯಲ್ಲಿ ಹೇಗೆ ನೆರವಾಗುತ್ತಾನೆ ಆತನ ದಿವ್ಯ ಲೀಲೆಗಳನ್ನು ಹೇಗೆ ಪ್ರದರ್ಶಿಸುತ್ತಾನೆ ಇತ್ಯಾದಿ ವಿವರಗಳು ಸವಿಸ್ತಾರದಿಂದ ಕೂಡಿರುತ್ತದೆ.
ಪುರಾಣಗಳಲ್ಲಿ ಶ್ರೀರಾಮಕೃಷ್ಣರನ್ನು ಒಳಗೊಂಡಂತೆ ಅವರ ಅವತಾರಗಳ ವಿವರಣೆಗಳಲ್ಲದೆ ಅನೇಕಾನೇಕ ಭಕ್ತರ ಕಥೆಗಳು, ಆದರ್ಶ ವ್ಯಕ್ತಿ ಚಿತ್ರಗಳ ವಿವರಣೆಗಳು ಧಾರಾಳವಾಗಿ ಸಿಗುತ್ತವೆ. ಪುರಾಣಗಳಲ್ಲಿ ಹದಿನೆಂಟು ಪುರಾಣಗಳೂ, ಹದಿನೆಂಟು ಉಪಪುರಾಣಗಳೂ ಇವೆ. ಈ ಪುರಾಣಗಳಲ್ಲಿ ಸ್ಕಾಂದ ಪುರಾಣವೂ ಒಂದು. ಸ್ಕಾಂದ ಪುರಾಣವು ಪುರಾಣಗಳ ಸಾಲಿನಲ್ಲಿ ಐದನೆಯದು. ಇದರಲ್ಲಿ ಪರಮೇಶ್ವರನ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ ಜೀವನ ಲೀಲೆಗಳ ಕುರಿತಾದ ವಿವರಣೆಗಳೂ ಮುಖ್ಯ ವಿಷಯವಾಗಿದೆ. ಶಿವವೈಭವದ ಕಥೆಗಳೂ, ಪುಣ್ಯಕ್ಷೇತ್ರಗಳ ವಿವರಗಳೂ ಸೇರಿರುವ ಬಹುವಿಸ್ತಾರವಾದ ಪುರಾಣವಿದು. ಸ್ಕಾಂದ ಪುರಾಣದಲ್ಲಿ ಮಾತೆ ಕಾವೇರಿಯ ಪೂರ್ಣ ವಿವರಣೆ ಸಿಗುತ್ತದೆ.
‘ಪುರಾಣ’ ಶಬ್ದಾರ್ಥ ಅತಿ ಪ್ರಾಚೀನ ಎಂದಾಗಿದೆ. ಎಂದರೆ ಬಹಳ ಹಿಂದೆ ನಡೆದದ್ದು ಎಂದರ್ಥ. ಹೀಗೆ ಹೇಳಬೇಕಾದರೆ ಅಧ್ಯಯನ ಶೀಲರು ಈ ಕೆಳಗಿನ ಮಾನದಂಡಗಳನ್ನು ಅವಲೋಕನ ಮಾಡುತ್ತಾರೆ. ಗ್ರಂಥವು ದೇಶ, ಚರಿತ್ರೆಯನ್ನು ಒಳಗೊಂಡಿರಬೇಕು; ಸೃಷ್ಟಿ ಚರಿತ್ರೆಯ ಬಗ್ಗೆ ಮಾಹಿತಿ ಇರಬೇಕು; ಉಪಸೃಷ್ಟಿ ವಿವರಣೆಗಳು; ರಾಜಮಹಾರಾಜರ ವಂಶಾವಳಿ ವಿವರಣೆಗಳು; ಮನ್ವಂತರ ಚರಿತ್ರೆ ಎಂದರೆ ಹಿಂದೆ ಆಗಿ ಹೋದ ಅನೇಕ ಮನುಗಳಲ್ಲಿ ಈ ಘಟನೆ ನಡೆದಾಗ ಎಷ್ಟನೇ ಮನು ಆಳುತ್ತಿದ್ದ ಇತ್ಯಾದಿ ಪೂರಕ ವಿವರಣೆಗಳು ಇರಬೇಕು. ಒಟ್ಟಿನಲ್ಲಿ ವೇದೋಪನಿಷತ್ತ್‍ಗಳಲ್ಲಿ ಸ್ಮøತಿ ಇತಿಹಾಸಗಳಲ್ಲಿ ಪ್ರತಿಪಾದಿತವಾಗಿದ್ದ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥ ಆಗುವಂತೆ ಹೇಳುವುದು ಪುರಾಣದ ಉದ್ದೇಶವಾಗಿದೆ.
ಯಾವುದೇ ಧಾರ್ಮಿಕ ಆಧ್ಯಾತ್ಮಿಕ, ಅಥವಾ ಪುರಾಣ ಗ್ರಂಥಗಳನ್ನು ಕಥೆ, ಪುಸ್ತಕಗಳನ್ನು ಓದಿದಂತೆ ಓದಿದರೆ ಯಾವ ಪ್ರಯೋಜನವೂ ಇಲ್ಲ, ಮಾತ್ರವಲ್ಲ ಸಮಯ ವ್ಯರ್ಥವೇ ಸರಿ. ಧಾರ್ಮಿಕ ಆಧ್ಯಾತ್ಮಿಕ ಗ್ರಂಥಗಳಲ್ಲಿ ಒಂದಾದ ‘ಭಗವದ್ಗೀತೆಯ ಆಂತರ್ಯವನ್ನು ಮಾನ್ಯ ಡಿ.ವಿ.ಜಿ.ಯವರು ಅರಿಯಲೆಂದೇ ‘ಜೀವನಧರ್ಮ ಯೋಗ’ ಎಂಬ ಗ್ರಂಥ ಬರೆದಿದ್ದಾರಷ್ಟೇ. ಆ ಗ್ರಂಥದ ಭೂಮಿಕೆಯಲ್ಲಿ ‘‘ಶ್ರದ್ಧಾವಾನ್ ಲಭತೇ ಜ್ಞಾನಮ್ ||
ಯೋ ಯಚ್ಛøದ್ಧ ಸ ಏವಸಃ||
ಶ್ರದ್ಧಾ ಹಿ ಪರಮಾಗತಿ||’’ ಎಂದು ಬರೆದು ಹೀಗೆ ವಿವರಿದ್ದಾರೆ. ‘‘ಶ್ರದ್ಧೆ ಇಲ್ಲದವನಿಗೆ ಬುದ್ಧಿ ಭ್ರಾಂತಿ ತಪ್ಪದು, ಗೀತೆಯು ಸರ್ವಾಂಶ ಪೂರ್ಣವೂ ಸರ್ವಸಮಂಜಸವೂ, ಸರ್ವಸಮರಸವೂ ಆದ ಜಗಜ್ಜೀವೇಶ್ವರ ತತ್ತ್ವ ನಿರೂಪಣೆ. ಅದರ ಬಳಿಗೆ ನಾವು ಹೋಗುವಾಗ ಭಕ್ತಿಶ್ರದ್ಧೆಗಳಿಲ್ಲದೆ ಹೋದರೆ ಮೈಲಿಗೆಯಲ್ಲಿ ಗುಡಿಗೆ ಹೋದಂತೆ ಅದು ವ್ಯರ್ಥ ಪ್ರಯಾಸವೇ ಸರಿ ಎಂದಿದ್ದಾರೆ. ಈ ಹೇಳಿಕೆಯನ್ನು ಯಾವುದೇ ಗ್ರಂಥವನ್ನು ಓದಲು ತೊಡಗಿದಾಗ ಗಮನದಲ್ಲಿಟ್ಟುಕೊಳ್ಳಬೇಕು. ಪುರಾಣಗಳಲ್ಲಿ ಮುಖ್ಯವಾಗಿ ಭಗವಂತನು ಸತ್ಯವನ್ನು ಒಳಗೊಂಡ ಧರ್ಮಪಕ್ಷಪಾತಿಯಾಗಿರುತ್ತಾನೆ. ಅವನ ಗುರಿ ‘ಸತ್ಯಂವದ ಧರ್ಮಂಚರ’ ಈ ಹಿನ್ನೆಲೆಯಲ್ಲಿ ಭಗವಂತನು ಭೂಮಿಯಲ್ಲಿ ಅವತರಿಸಿ ತನ್ನ ನಾನಾ ರೀತಿಯ ಲೀಲೆಗಳನ್ನು ಕಾಣಿಸುವ ವಿವರಗಳು ಸವಿಸ್ತಾರವಾಗಿರುತ್ತವೆ.
ಇದುವರೆಗೆ ಬರೆದ ಪ್ರಾಸ್ತಾವಿಕ ನುಡಿಗಳ ಉದ್ದೇಶ ಆಧುನಿಕ ತರುಣ ಜನಾಂಗವು ಪುರಾಣಗಳನ್ನು ಓದುವ ಉತ್ಸುಕತೆಯನ್ನು ತೋರಿದಾಗ, ಅವರು ಎಚ್ಚರವಹಿಸಲಿ ಎಂಬದಾಗಿದೆ. ತಲಕಾವೇರಿ, ಮತ್ತು ಅಲ್ಲಿ ಜನಿಸಿ ಜನಸಾಮಾನ್ಯರಿಗೆ ಅನ್ನದಾತೆಯಾಗಿ ಹರಿದು ಸಮುದ್ರ ಸೇರುವ ಬಗ್ಗೆ ಈ ಮೊದಲಿನ ವಿದ್ವಾಂಸರು ನೀಡಿದ ವಿವರಣೆಗಳು ರೋಚಕವಾಗಿದ್ದರೂ ಈ ಬಗ್ಗೆ ಇನ್ನಷ್ಟು ಮತ್ತಷ್ಟು ಸಂಶೋಧನೆಗಳಿಗೆ ಅವಕಾಶ ಇದ್ದಂತೆ ಕಾಣುತ್ತದೆ. ಉತ್ಸಾಹಿಗಳು ಈ ಬಗ್ಗೆ ಪ್ರಯತ್ನಿಸಬೇಕು.
ಬಲುಮುಖ್ಯವಾಗಿ ಕೊಡಗಿನ ಜನತೆ ಮತ್ತು ಕಾವೇರಿ ನದಿಯಿಂದ ಉಪಕಾರ ಪಡೆಯುವ ನದಿ ಪ್ರದೇಶದ ಜನರು, ಕರಾವಳಿ ಪ್ರದೇಶದ ಭಕ್ತರು, ಮಲೆನಾಡಿನವರು ಪ್ರತಿವರ್ಷ ತಪ್ಪದೆ ತುಲಾಸಂಕ್ರಮಣದಂದು (ಅಕ್ಟೋಬರ್ ಮಧ್ಯ ಭಾಗ) ತಲಕಾವೇರಿಗೆ ಬಂದು ತೀರ್ಥೋದ್ಭವದ ದೈವಿಕ ವೈಭವವನ್ನು ನೋಡಿ ಪುನೀತರಾಗುತ್ತಾರೆ. ನೂರಾರು ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಅಗಲಿದ ಹಿರಿಯರಿಗೆ ತರ್ಪಣ ಬಿಟ್ಟು ಹಿರಿಯರಿಗೆ ಗೌರವ ಸಲ್ಲಿಸಿದ ಬಗ್ಗೆ ತೃಪ್ತಿ ಕಾಣುತ್ತಾರೆ. ಇವೆಲ್ಲಾ ಧಾರ್ಮಿಕ ಆಚರಣೆಗಳು; ಆದರೆ ಇಷ್ಟರಿಂದಲೇ ಕಾವೇರಿ ಮಾತೆಯ ಬಗ್ಗೆ ತಿಳಿದಂತಾಗುವುದಿಲ್ಲ. ಇವುಗಳ ಜೊತೆಗೆ ಕಾವೇರಿ ಹರಿಯುವ 760 ಕಿ. ಮೀ. ದೂರದವರೆಗೂ ಪ್ರಯಾಣಿಸಿ ಅಲ್ಲಿನ ಜನಜೀವನ ಹೇಗೆ ಸಾಗುತ್ತಿದೆ, ಏಕಾಗಿ ಅಲ್ಲಿನ ಜನರು ಕಾವೇರಿಯನ್ನು ಆರಾಧಿಸುತ್ತಾರೆಂದು ತಿಳಿಯುವುದು ಬಲು ಮುಖ್ಯ. ಹಾಗಾದಾಗ ಮಾತ್ರ ನಮ್ಮ ಕಾವೇರಿಯ ವಿಶಿಷ್ಟತೆ ತಿಳಿದಂತಾಗುತ್ತದೆ.
ನದಿಗಳೆಲ್ಲವೂ ಮಾತೃ ಸ್ವರೂಪಿಯರೇ, ಅದರಲ್ಲೂ ನಮ್ಮ ಕಾವೇರಿಯಂತೂ ಅನ್ನದಾತೆ. ಭಾರತದ ಸಪ್ತ ಪವಿತ್ರ ನದಿಗಳಲ್ಲಿ ಒಬ್ಬಳಾಗಿದ್ದಾಳೆ. ಸನಾತನ ಧರ್ಮೀಯ ಆಸ್ತಿಕರು ಪ್ರತಿದಿನ ಸ್ನಾನ ಮಾಡುವಾಗ ಭಕ್ತಿಯಿಂದ; ‘‘ಗಂಗೇಚ ಯಮುನೇಚೈವ, ಗೋದಾವರಿ, ಸರಸ್ವತಿ, ನರ್ಮದೇ, ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’’ ಎಂದು ಹೇಳಿಕೊಳ್ಳುತ್ತಾ ಏಳೂ ನದಿಗಳ ಪುಣ್ಯ ಜಲತೀರ್ಥದಲ್ಲಿ ಸ್ನಾನ ಮಾಡಿಕೊಂಡು ಪುನೀತರಾಗುತ್ತಿದ್ದೇವೆ ಎಂದು ಭಾವಿಸಿಕೊಳ್ಳುತ್ತಾರೆ. ಪುರಾಣೇತಿಹಾಸಗಳಲ್ಲಿ ಲೋಪಾಮುದ್ರೆ ಕಾವೇರಿಯ ಕಥೆ ಜನಜನಿತವಾಗಿದೆ. ರಾಮಾಯಣದಲ್ಲೂ ಸುಗ್ರೀವನು ಮಾತೆ ಸೀತಾದೇವಿಯ ಅನ್ವೇಷಣೆಗೆ ತನ್ನ ವಾನರ ಸೈನ್ಯವನ್ನು ಕಳಿಸಿಕೊಡುವ ಸಂದರ್ಭದಲ್ಲಿ ಕಾವೇರಿ ನದಿಯ ಬಗ್ಗೆ ಮುಕ್ತ ಕಂಠದಲ್ಲಿ ಹೇಳಿಕೊಂಡಿದ್ದಾನೆ. ನಂತರ ಮಹಾಭಾರತದಲ್ಲೂ ಕಾವೇರಿಯ ಬಗ್ಗೆ ಪ್ರಸ್ತಾಪಿಸುತ್ತಾ ಕಾವೇರಿ ನದಿಯು ಬಲು ಪುಣ್ಯ ನದಿಯೆಂದೂ ಆ ನದಿಯಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಸ್ನಾನ ಮಾಡಿದರೆ ಸಹಸ್ರ ಗೋವುಗಳನ್ನು ದಾನ ಮಾಡಿದ ಪುಣ್ಯ ಲಭಿಸುವುದೆಂದೂ ಕೊಂಡಾಡಿದ್ದಾರೆÉ. ಬ್ರಹ್ಮಾಂಡ ಪುರಾಣದಲ್ಲಿಯೂ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಸಂಚಿತ ಪಾಪಗಳೆಲ್ಲವೂ ನಶಿಸಿ ಹೋಗುತ್ತದೆಂಬ ಹೇಳಿಕೆಯಿದೆ.
ಸ್ಕಾಂದ ಪುರಾಣದಲ್ಲಿ ಕಾವೇರಿ ಮಹಾತ್ಮೆಯ ಬಗ್ಗೆ ಪಾರ್ವತಿ ಪರಮೇಶ್ವರ ಪರಿವಾರ ರೂಪದಲ್ಲಿನ ಮೂಲಕ ನೀಡುವ ಮಾಹಿತಿ ಬಹಳ ಮಹತ್ವದ್ದಾಗಿದೆ. ಮೇಲಿನ ಎಲ್ಲಾ ಹೇಳಿಕೆಗಳು ರಾಮಾಯಣ ಮಹಾಭಾರತದ ಮತ್ತು ಅದರ ಪೂರ್ವದ ವಿಚಾರಗಳಾದರೂ ಆಧುನಿಕ ವರ್ಷಗಳಲ್ಲೂ ಕಾವೇರಿಯ ಬಗ್ಗೆ ಜನಸಾಮಾನ್ಯರಿಗಿರುವ ಗೌರವ ಭಕ್ತಿ ಕಡಿಮೆಯಾಗದಿರಲು ಕಾರಣ ಅವಳು ಮಾನವ ಕೋಟಿಗೆ ಮಾಡುತ್ತಿರುವ ಮಹದುಪಕಾರವಾಗಿದೆ. ಆದರೆ, ಆಧುನಿಕ ಸಮಾಜದ ನವನಾಗರಿಕರು ನದಿಯ ಉಗಮ ಸ್ಥಾನದಿಂದ ಸಮುದ್ರದವರೆಗೆ ನದಿ ಸಮುದ್ರ ಸೇರುವವರೆಗೆ ನದಿಯನ್ನು ಕಲುಷಿತಗೊಳಿಸುವಲ್ಲಿ ನಾ ಮುಂದು, ತಾಮುಂದು ಎಂದು ಸ್ಪರ್ಧಿಸುತ್ತಿದ್ದಾರೆನೋ ಎಂಬ ಭಾವನೆ ಬರುತ್ತಿದೆ. ಭಾರತದಾದ್ಯಂತ ಹರಿಯುತ್ತಿರುವ ನದಿಗಳನ್ನು ಸ್ವಚ್ಚಗೊಳಿಸಿ ಜನರಿಗೆ ಉಪಕಾರಿಯಾಗಲು ಅಲ್ಲಿ ಇಲ್ಲಿ ಹಲವು ಸಂಘ-ಸಂಸ್ಥೆಗಳು ಕೆಲವು ತರುಣರನ್ನು ಒಳಗೊಂಡ ಸೇವಾಸಂಸ್ಥೆಗಳು ಪ್ರಯತ್ನಪಡುತ್ತಿವೆ. ಆದರೆ, ಈ ಬಗ್ಗೆ ಸ್ವತಃ ಜನಸಾಮಾನ್ಯರೇ ಎಚ್ಚೆತ್ತುಕೊಂಡು ಈಗ ವಿವರಿಸಿದ ಸಂಘ-ಸಂಸ್ಥೆಗಳಿಗೆ, ಸರಕಾರ ಸಹಾಯ ಹಸ್ತ ನೀಡಬೇಕಾಗಿದೆ. ಮತ್ತು ಕಾವೇರಿ ಜೀವನಾಡಿ ಎಂಬ ಹೆಸರನ್ನು ಸಾರ್ಥಕಗೊಳಿಸಬೇಕಾಗಿದೆ.
-ಜಿ. ಟಿ. ರಾಘವೇಂದ್ರ,
ಮಡಿಕೇರಿ.
ಮೊ: 9480463090