ಮಡಿಕೇರಿ, ನ. 8: ಕೊಡಗು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪ್ರಸಕ್ತ ವರ್ಷದಿಂದ ಸ್ವಂತ ಕಟ್ಟಡದೊಂದಿಗೆ ಬಲಿಷ್ಠ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ; 106ನೇ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆಡಳಿತ ಮಂಡಳಿಗೆ ಇದೇ ತಾ. 11 ರಂದು ಚುನಾವಣೆ ನಡೆಯಲಿದೆ. ಪ್ರಸಕ್ತ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳಿಂದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬದಲಾಗಿ ಸೋಮವಾರಪೇಟೆ ತಾಲೂಕಿನ ಒಟ್ಟು 3 ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದೆ.

ಮಡಿಕೇರಿ ತಾಲೂಕಿನಿಂದ ಕೊಡಗು ಹಾಪ್‍ಕಾಮ್ಸ್‍ನ ನಿಕಟಪೂರ್ವ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕೋಣೇರಿರ ಮನೋಹರ್, ಕಾಂಗೀರ ಸತೀಶ್ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನು ಮಹಿಳಾ ಮೀಸಲು ಸ್ಥಾನದಿಂದ ಬೇಬಿ ಪೂವಯ್ಯ ಹಾಗೂ ಸಂಘ ಸಂಸ್ಥೆ ಪ್ರತಿನಿಧಿಯಾಗಿ ನಾಗೇಶ್ ಕುಂದಲ್ಪಾಡಿ ಅವಿರೋಧವಾಗಿ ನೇಮಕಗೊಂಡಿದ್ದಾರೆ.

ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜನಾಂಗದಿಂದ ಹಾಲೀ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಪರಿಶಿಷ್ಟ ಪಂಗಡದಿಂದ ಪೂವಪ್ಪ ನಾಯಕ್, ಹಿಂದುಳಿದ ವರ್ಗದ 2 ಸ್ಥಾನಗಳಿಗೆ ಪಾಡಿಯಮ್ಮಂಡ ಮನು ಮಹೇಶ್ ಹಾಗೂ ಅರಸು ಇವರುಗಳು ಆರಿಸಲ್ಪಟ್ಟಿದ್ದಾರೆ. ಈ ನಡುವೆ ಜಿಲ್ಲಾ ಮಟ್ಟದ ಮಹಿಳಾ ಮೀಸಲು ಒಂದು ಸ್ಥಾನಕ್ಕೆ ಸೋಮವಾರಪೇಟೆ ತಾಲೂಕಿನಿಂದ ಲೀಲಾ ಮೇದಪ್ಪ ಹಾಗೂ ಕೆ.ಸಿ. ಶಶಿಕಲಾ ಸ್ಪರ್ಧಾ ಕಣದಲ್ಲಿದ್ದು, ಚುನಾವಣೆ ಎದುರಿಸುತ್ತಿದ್ದಾರೆ.

ಇನ್ನೊಂದೆಡೆ ಸೋಮವಾರಪೇಟೆ ತಾಲೂಕಿನಿಂದ ಎರಡು ಸಾಮಾನ್ಯ ಕ್ಷೇತ್ರಗಳಿಗೆ ನಾಲ್ವರು ಕಣದಲ್ಲಿದ್ದು, ಎಸ್.ಪಿ. ಪೊನ್ನಪ್ಪ, ಪಿ.ಎಸ್. ರತೀಶ್, ಹೆಚ್.ಎಂ. ಲೋಕೇಶ್ ಹಾಗೂ ಹೆಚ್.ಎಂ. ಸುಧೀರ್ ಪೈಪೋಟಿ ಎದುರಿಸುತ್ತಿದ್ದಾರೆ. ಅತ್ತ ವೀರಾಜಪೇಟೆ ತಾಲೂಕಿನ ಎರಡು ಸಾಮಾನ್ಯ ಸ್ಥಾನಗಳಿಗೆ ಈಗಾಗಲೇ ಮಾಚಿಮಂಡ ಸುವಿನ್ ಗಣಪತಿ ಹಾಗೂ ಮಲ್ಲಂಡ ಮಧು ದೇವಯ್ಯ ಇಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸುವದರೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.