ಸೋಮವಾರಪೇಟೆ, ನ.7: ಸಾರ್ವಜನಿಕರಿಂದ ಸರ್ಕಾರಿ ಕೆಲಸಗಳಿಗೆ ಗ್ರಾಮ ಸಹಾಯಕರು ಹಣ ಪಡೆಯುತ್ತಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘವು, ಅಂತಹ ಪ್ರಕರಣಗಳಿದ್ದರೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಲಿ ಎಂದು ಅಭಿಪ್ರಾಯಿಸಿದೆ. ಈ ಬಗ್ಗೆ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಕಂದಾಯ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ಗ್ರಾಮ ಸಹಾಯಕರು ಚಾಚೂ ತಪ್ಪದೇ ನಿರ್ವಹಿಸಿಕೊಂಡು ಬರುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಸೇವೆ ನೀಡಿದ್ದೇವೆ. ಆದರೂ ಸಹ ಕ್ಷೇತ್ರದ ಶಾಸಕರು, ಸಾರ್ವಜನಿಕ ವಲಯದಲ್ಲಿ ಗ್ರಾಮ ಸಹಾಯಕರ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆ ಹೇಳಿಕೆ ನೀಡಿರುವದು ಬೇಸರ ಮೂಡಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಹೇಳಿದ್ದಾರೆ.
ಒಂದು ವೇಳೆ ಸಾರ್ವಜನಿಕ ಕೆಲಸಕಾರ್ಯಗಳಿಗೆ ಹಣ ಪಡೆಯುತ್ತಿದ್ದರೆ ಅಂತಹ ಗ್ರಾಮ ಸಹಾಯಕರ ವಿರುದ್ಧ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಸಲ್ಲಿಸಿದ್ದಾರೆ. ಈ ಸಂದರ್ಭ ಸಂಘದ ಖಜಾಂಚಿ ಶಶಿಕುಮಾರ್, ಪದಾಧಿಕಾರಿಗಳಾದ ಭರತ್‍ಕುಮಾರ್, ಚರಣ್, ರಾಯನ್ ಹಾಗೂ ರಂಜನ್ ಉಪಸ್ಥಿತರಿದ್ದರು.