ಸಿದ್ದಾಪುರ, ನ. 8: ಓಡಿಪಿ ಮೈಸೂರು ಹಾಗೂ ಜರ್ಮನಿಯ ಅಂದೇರಿಹಿಲ್ಪೆ ಸಂಸ್ಥೆಯ ವತಿಯಿಂದ ನೊಂದಾಯಿತ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಉಚಿತ ಗೊಬ್ಬರ ವಿತರಣೆ ಕಾರ್ಯಕ್ರಮವು ಪಾಲಿಬೆಟ್ಟದ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಾಲಿಬೆಟ್ಟದ ಗ್ರಾ.ಪಂ ಮಾಜಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಓಡಿಪಿ ಸಂಸ್ಥೆಯು ಸಮಾಜ ಸೇವೆಯೊಂದಿಗೆ ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಓಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನೆಜಸ್ ಮಾತನಾಡಿ ಸರಕಾರದಿಂದ ಪಹಣಿಪತ್ರ ಹೊಂದಿರುವ ರೈತರಿಗೆ ಮಾತ್ರ ಸೌಲಭ್ಯಗಳು ದೊರೆಯುತ್ತಿದೆ. ಆದರೆ ಓಡಿಪಿ ಸಂಸ್ಥೆ ಹಾಗೂ ಜರ್ಮನಿಯ ಅಂದೇರಿಹಿಲ್ಪೆ ಸಂಸ್ಥೆ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಗುರುತಿಸಿ ಅವರುಗಳಿಗೆ ಉಚಿತ ಗೊಬ್ಬರವನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಧನುಕುಮಾರ್, ವಿಜಯ ನಾರಾಯಣ, ನಳಿನಿ ಇನ್ನಿತರರು ಹಾಜರಿದ್ದರು. ರೇವತಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ 16 ಮಂದಿ ನೊಂದಾಯಿತ ರೈತರಿಗೆ ಉಚಿತ ಗೊಬ್ಬರವನ್ನು ವಿತರಿಸಲಾಯಿತು. ಜಲಜಾಕ್ಷಿ ವಂದಿಸಿದರು.