ಮಡಿಕೇರಿ, ನ. 8: ಮಡಿಕೇರಿ ತಾಲೂಕಿನ ಕುಗ್ರಾಮಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಅವರು ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಮಡಿಕೇರಿಯಿಂದ ಹೊದಕಾನ, ಮುಕ್ಕೋಡ್ಲು, ಆವಂಡಿ, ಹಚ್ಚಿನಾಡು ಮತ್ತು ಹಮ್ಮಿಯಾಲ ಗ್ರಾಮಗಳಿಗೆ ಪ್ರತಿದಿನ ಸರ್ಕಾರಿ ಬಸ್‍ಗಳ ಸಂಚಾರವಿತ್ತು. ಆದರೆ ಕೋವಿಡ್ ನಡುವೆ ಈ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರು ಸುಮಾರು 19 ಕಿ.ಮೀ ದೂರದÀ ಮಡಿಕೇರಿ ಪಟ್ಟಣಕ್ಕೆ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಬಂದೊದಗಿದೆ. ವಯೋವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರು ಆಸ್ಪತ್ರೆಗಳಿಗೆ ತೆರಳಲಾಗದೆ ಪರದಾಡುತ್ತಿದ್ದಾರೆ.
ಶುಕ್ರವಾರದ ಸಂತೆಗೆ ಬಸ್ ವ್ಯವಸ್ಥೆಯಿಲ್ಲದೆ ದುಬಾರಿ ಬಾಡಿಗೆ ನೀಡಿ ಆಟೋರಿಕ್ಷಾದಲ್ಲಿ ಗ್ರಾಮಸ್ಥರು ಬರುತ್ತಿದ್ದಾರೆ. ಬಸ್‍ಗಳ ಸಂಚಾರಕ್ಕೆಂದೇ ರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಮನವಿಗೆ ಸ್ಪಂದಿಸಿರುವ ಡಿಪೋ ವ್ಯವಸ್ಥಾಪಕರು ಮುಂದಿನ ಶುಕ್ರವಾರದಿಂದ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.