ಮಡಿಕೇರಿ, ನ. 7: ಅಕ್ರಮ ಜಾನುವಾರು ಸಾಗಾಟಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಮಡಿಕೇರಿ ಡಿವೈಎಸ್‍ಪಿ ದಿನೇಶ್‍ಕುಮಾರ್ ಅವರಿಗೆ ಸೂಚನೆ ನೀಡಿದರು.ನಗರದ ತಾ.ಪಂ. ಎಸ್‍ಜೆಎಸ್‍ವೈ ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೋಪಯ್ಯ ಅವರು, ಚೇಲಾವರ ಬೆಟ್ಟದ ಮೂಲಕ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಗಡಿಗೇಟ್‍ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೂಡ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.
ಕೃಷಿಕರಿಗೆ ತೊಂದರೆ ನೀಡಬೇಡಿಜಿಲ್ಲೆಯಲ್ಲಿನ ಸಿ ಮತ್ತು ಡಿ ಭೂಮಿ ಜಂಟಿ ಸರ್ವೇಯಾಗು ವವರೆಗೆ ಯಾವುದೇ ಕಾರಣಕ್ಕೂ ಕೃಷಿಕರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಸ್ಪಷ್ಟ ನಿರ್ದೇಶನ ನೀಡಿದರು. ಹಲವು ದಶಕಗಳಿಂದ ಪೈಸಾರಿ ಭೂಮಿಯಲ್ಲಿ ಕಾಫಿ ಗಿಡ ಕೃಷಿ ಮಾಡಿಕೊಂಡು ಬರುತ್ತಿರುವ ಸಣ್ಣ ರೈತರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಂತಹ ದೂರುಗಳು ಕೇಳಿ ಬರಬಾರದು. ಭಾಗಮಂಡಲ, ಸಂಪಾಜೆ, ಕಾಲೂರು, ಬಿರುನಾಣಿ ಮತ್ತಿತರ ಭಾಗಗಳಲ್ಲಿ ಎಷ್ಟು ಕಷ್ಟದಿಂದ ಬದುಕುತ್ತಿದ್ದಾರೆ ಎಂಬ ಬಗ್ಗೆ ಯೋಚಿಸಬೇಕು ಎಂದರು. ಕಂದಾಯ ಇಲಾಖೆ ಮೂಲಕ ಆಗಬೇಕಿರುವ (ಮೊದಲ ಪುಟದಿಂದ) ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಜಾಗ ಒದಗಿಸುವುದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ಜಿ.ಬೋಪಯ್ಯ ಸೂಚಿಸಿದರು. ತಹಶೀಲ್ದಾರ್ ಮಹೇಶ್ ಅವರು 26 ಗ್ರಾ.ಪಂ.ಗಳಲ್ಲಿ 12 ಗ್ರಾ.ಪಂ.ಗಳಿಗೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಒದಗಿಸಲಾಗಿದೆ. ಉಳಿದ ಗ್ರಾ.ಪಂ.ಗಳಿಗೆ ಭೂಮಿ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸರ್ಕಾರ ಪೌತಿ ಖಾತೆ ಆಂದೋಲನ ನಡೆಸಲು ಅವಕಾಶ ನೀಡಿದ್ದು, ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯರಿಗೆ ಮಾಹಿತಿ ನೀಡಿ ಪೌತಿ ಖಾತೆ ಆಂದೋಲನವನ್ನು ಯಶಸ್ವಿಗೊಳಿಸುವಂತೆ ತಹಶೀಲ್ದಾರರಿಗೆ ಬೋಪಯ್ಯ ಸೂಚಿಸಿದರು.
ಸಹಾಯಧನ ತಲುಪಿಸಿ
ರಾಷ್ಟ್ರೀಯ ತೋಟಗಾರಿಕಾ ಅಭಿಯಾನ ಯೋಜನೆಯಡಿ ಕಿತ್ತಳೆ ಮತ್ತು ಕಾಳು ಮೆಣಸು ಗಿಡ ವಿತರಣೆ, ಜೇನು ಕೃಷಿ ಅಭಿವೃದ್ಧಿ, ಬಾಳೆ ಬೆಳೆಗೆ ಸಹಾಯಧನ, ಹೀಗೆ ಹಲವು ಕಾರ್ಯಕ್ರಮಗಳಿಗೆ ಸಹಾಯಧನವನ್ನು ಕೃಷಿಕರಿಗೆ ತಲುಪಿಸಬೇಕು.
ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಪ್ರತೀ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿವಿಧ ನಿಗಮ ವ್ಯಾಪ್ತಿಯಲ್ಲಿ ಬಾಕಿ ಇರುವ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಸಂಬಂಧ ಪಂಚಾಯತ್ ರಾಜ್ ಇಲಾಖೆಯವರು ಅನುದಾನ ಒದಗಿಸುವಂತೆ ಕೆಜಿಬಿ ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸರ್ಕಾರದ ಸಹಾಯಧನ ಕಲ್ಪಿಸಲಾಗಿದೆಯೇ ಎಂದು ಮಾಹಿತಿ ಪಡೆದರು. ಈ ಸಂಬಂಧ ಮಾಹಿತಿ ನೀಡಿದ ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟಿ ಅವರು ತಾಲೂಕಿನಲ್ಲಿ 443 ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಮಣ್ಣು ಪರೀಕ್ಷೆಯನ್ನು ಎಲ್ಲೆಲ್ಲಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ಪಡೆದರು. ಈ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಉಪ ನಿರ್ದೇಶಕ ರಾಜು ಮಣ್ಣು ಪರೀಕ್ಷೆಯನ್ನು ರ್ಯಾಂಡಮ್ ಆಗಿ ಗ್ರಾಮಗಳಲ್ಲಿ ಮಾಡಲಾಗುತ್ತದೆ. ಮಣ್ಣು ಪರೀಕ್ಷೆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಿದಲಿ,್ಲ ಮಣ್ಣು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಇನ್ನೂ ಸಿಗದ ಪ್ಯಾಕೇಜ್
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ 2018ರಲ್ಲಿ ಮಕ್ಕಂದೂರು, ಕೆ.ನಿಡುಗಣೆ, ಮದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರಕೃತಿ ವಿಕೋಪದಿಂದ ಭತ್ತದ ಗದ್ದೆಗಳಲ್ಲಿ ಮರಳು, ಮಣ್ಣು, ಮರ ತುಂಬಿ ಹೋಗಿದ್ದು, ಈ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಮಾಡಿಕೊಂಡು ಬರಲಾಗಿದೆ. ಆದರೆ ಈ ಕಾರ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕೋರಂಗಾಲ ಚೇರಂಗಾಲ ಭಾಗದಲ್ಲಿ ಸೇತುವೆ ರಸ್ತೆಗಳು ಕುಸಿದಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಕೆ.ಜಿ.ಬೋಪಯ್ಯ ಪಂಚಾಯತ್ ರಾಜ್ ಎಂಜಿನಿಯರ್‍ಗೆ ಸೂಚಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸಬೇಕು. ಖಾಸಗಿ ಬಸ್ ನಿಲ್ದಾಣ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಪೌರಾಯುಕ್ತರಿಗೆ ಕೆ.ಜಿ.ಬೋಪಯ್ಯ ಸೂಚಿಸಿದರು.
ವೀಣಾ ಅಚ್ಚಯ್ಯ ಮಾತನಾಡಿ ಸಂಪಿಗೆ ಕಟ್ಟೆಯಿಂದ ಕನ್ನಂಡಬಾಣೆ ರಸ್ತೆಯ ಗುಂಡಿಯನ್ನಾದರೂ ಮುಚ್ಚುವಂತೆ ಸೂಚಿಸಿದರು. ತಾಲೂಕು ಪಂಚಾಯಿತಿ ಕಚೇರಿ ಮಾರ್ಗದ ರಸ್ತೆ ಸರಿಪಡಿಸುವಂತೆ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಹೇಳಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ತಾಲೂಕಿನ ಹಲವು ರಸ್ತೆಗಳು ಹದಗೆಟ್ಟಿದ್ದು, ಅನುದಾನ ಬೇಕಿದ್ದಲ್ಲಿ ಇಲಾಖೆ ಎಂಜಿನಿಯರ್‍ಗಳು ಗಮನಕ್ಕೆ ತರಬೇಕು. ಅದು ಬಿಟ್ಟು ಕ್ರಿಯಾಯೋಜನೆಯನ್ನು ಸರಿಯಾಗಿ ತಯಾರಿಸದೆ ಇರುವುದು ಏಕೆ ಎಂದು ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ವೀಣಾ ಅಚ್ಚಯ್ಯ ಅವರು ಮಕ್ಕಂದೂರು ಭಾಗದಲ್ಲಿ ಮೂರು ವರ್ಷದಲ್ಲಿ ಮೂರು ಬಾರಿ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ವಿಷಾದಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಮಾಂದಲ್ಪಟ್ಟಿ ರಸ್ತೆಯನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡಿದ್ದು, ಅರಣ್ಯ ಇಲಾಖೆಯವರು ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂದು ಶಾಸಕ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ರಾಜಾಸೀಟಿನಲ್ಲಿ 3.85 ಕೋಟಿ ರೂ. ವೆಚ್ಚದಲ್ಲಿ ಪಾಥ್ ವೇ ನಿರ್ಮಾಣವಾಗುತ್ತಿದೆ. ಜೊತೆಗೆ 47 ಸಾವಿರ ಗಿಡಗಳನ್ನು ನೆಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಾಹಿತಿ ನೀಡಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ ಅವರು ಕ್ರಿಯಾ ಯೋಜನೆಯಲ್ಲಿ ಮ್ಯಾನುವೆಲ್ ಮಾಡಲು ಹೇಳಲಾಗಿದೆ. ಆದರೆ ಜೆಸಿಬಿ ಮೂಲಕ ಕಾಮಗಾರಿ ನಿರ್ವಹಿಸುತ್ತಿರುವುದು ಏಕೆ? ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಕುಸಿದಿವೆ. ಅದನ್ನು ಅರ್ಥಮಾಡಿ ಕೊಳ್ಳುವುದು ಬೇಡವೇ. ರಾಜಾಸೀಟು ಕೆಳಭಾಗದಲ್ಲಿ ವಾಸಿಸುವ ಜನರ ಗತಿಯೇನು ಎಂದು ಪ್ರಶ್ನಿಸಿದರು. ತಾ.ಪಂ.ಸದಸ್ಯರಾದ ಕೊಡಪಾಲ ಗಣಪತಿ, ಕೋಡಿಯಂಡ ಇಂದಿರಾ, ಕುಮುದ ರಶ್ಮಿ ಅವರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.
ತಾ.ಪಂ.ಇಒ ಲಕ್ಷ್ಮೀ ಅವರು ತಾ.ಪಂ.ವ್ಯಾಪ್ತಿಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶ್ರೀಕಂಠಯ್ಯ, ಸೆಸ್ಕ್ ಎಂಜಿನಿಯರ್ ದೇವಯ್ಯ, ಆಹಾರ ಇಲಾಖೆ ನಿರೀಕ್ಷಕರಾದ ಪ್ರವೀಣ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ಪೌರಾಯುಕ್ತರಾದ ರಾಮದಾಸ್ ಇತರರು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ಬಗ್ಗೆ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯರಾದ ಯಾಲದಾಳು ಪದ್ಮಾವತಿ, ಕಲಾವತಿ, ತಾ.ಪಂ.ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಡಬ್ಬಡ್ಕ ಶ್ರೀಧರ್, ಗ್ರಾ.ಪಂ. ಆಡಳಿತ ಅಧಿಕಾರಿಗಳು, ಪಿಡಿಒಗಳು ಇತರರು ಇದ್ದರು.