ಮಡಿಕೇರಿ, ನ. 7: ಕೊಡಗು ಜಿಲ್ಲಾ ಪೊಲೀಸ್ ತಂಡದಿಂದ ಸಾಮಾಜಿಕ ಕಳಕಳಿಯೊಂದಿಗೆ ಉತ್ತಮ ಸೇವೆ ಜನತೆಗೆ ಲಭ್ಯವಿದೆ. ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವಾಲಯಕ್ಕೆ ಇನ್ನಷ್ಟು ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಪರಿಣಾಮಕಾರಿ ಸೇವೆ ಸಲ್ಲಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿ ಹೇಳಿದ್ದಾರೆ.ನಿನ್ನೆ ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, 2018ರ ಪ್ರಾಕೃತಿಕ ವಿಕೋಪ ದಿಂದ ಇತ್ತೀಚಿನ ದುರಂತಗಳನ್ನು ಸಕಾಲದಲ್ಲಿ ನಿಭಾಯಿಸುವಲ್ಲಿ ಪೊಲೀಸರ ಸೇವೆ ಶ್ಲಾಘನೀಯ ವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಯಾವದೇ ಸಮಾಜಘಾತುಕ ಚಟುವಟಿಕೆಗಳು ಅಕ್ರಮ ದಂಧೆ, ಹೊರ ರಾಜ್ಯದಿಂದ ನಕ್ಸಲರ ನುಸುಳುವಿಕೆ ಕುರಿತು ಎಲ್ಲಾ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿರಂತರ ಗಸ್ತು ಅಗತ್ಯವೆಂದು ಗೃಹ ಸಚಿವರು ಸೂಚಿಸಿದ್ದಾರೆ. ಈ ದಿಸೆಯಲ್ಲಿ ಕೊಡಗು ಪೊಲೀಸ್ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರಕಾರದಿಂದ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವದು ಎಂದು ಭರವಸೆ ನೀಡಿರುವ ಸಚಿವÀ ಬೊಮ್ಮಾಯಿ, ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನ ದೊಂದಿಗೆ, ಒಳ್ಳೆಯ ರೀತಿ ಕರ್ತವ್ಯ ನಿರ್ವಹಿಸುವದರಿಂದ ಇಲಾಖೆ ಯೊಂದಿಗೆ, ಸರಕಾರಕ್ಕೂ ಹೆಸರು ಬರಲಿದೆ ಎಂದು ನೆನಪಿಸಿದ್ದಾರೆ.
ಪೊಲೀಸ್ ಇಲಾಖೆಯು ಸದಾ ಜಾಗೃತವಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದ್ದರೆ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯವೆಂದು ಸಚಿವರು ಸಂದೇಶ ರವಾನಿಸಿದ್ದಾರೆ. ದಕ್ಷಣೆಯಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಸರಕಾರ ಸದಾ ಬೆಂಬಲವಿರುವದಾಗಿ ಭರವಸೆ ನೀಡಿದ ಸಚಿವರು, ಪೊಲೀಸ್ ವರಿಷ್ಠಾದಿಕಾರಿ ಕ್ಷಮಾಮಿಶ್ರಾ ಸಲ್ಲಿಸಿರುವ ಬೇಡಿಕೆಗಳನ್ನು ಗೃಹ ಇಲಾಖೆಯಿಂದ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವದಾಗಿಯೂ ಸಚಿವ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ. ಸಚಿವರ ಭೇಟಿ ವೇಳೆ ಪೊಲೀಸ್ ಇಲಾಖೆಯಿಂದ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಗೌರವ ರಕ್ಷೆ ನೀಡಲಾಯಿತು.