ಕಣಿವೆ, ನ. 8: ಕಾಫಿ ತೋಟಕ್ಕೂ ಸಿಲ್ವರ್ ಮರಗಳಿಗೂ ಏನೋ ಒಂದು ರೀತಿಯ ಅನುಬಂಧ. ಸಿಲ್ವರ್ ಮರಗಳು ಇಲ್ಲದ ಕಾಫಿ ತೋಟಗಳನ್ನು ಊಹಿಸಲು ಅಸಾಧ್ಯ. ಅಷ್ಟರ ಮಟ್ಟಿಗೆ ಕಾಫಿ ತೋಟಗಳಿಗೆ ಸಿಲ್ವರ್ ಧಾಂಗುಡಿ ಇಟ್ಟಿದೆ. ಭೂಮಿಯಲ್ಲಿನ ನೀರಿನ ತೇವಾಂಶವನ್ನು ಹೀರಿ, ನೂರಾರು ಅಡಿಗಳ ಎತ್ತರಕ್ಕೆ ನೀಳವಾಗಿ ಬೆಳೆದು ಸಾಗುವ ಈ ಸಿಲ್ವರ್ ಭೂಮಿಗೆ ನೀಡುವ ನೆರಳಿನಷ್ಟೆ, ಭೂ ಒಡಲಿಗೆ ಮಾರಕ ಎನ್ನಲಾಗುತ್ತಿದೆ. ಅಂದರೆ ಭೂಮಿಯ ಮಣ್ಣಿನ ಸತ್ವ ಹಾಗೂ ನೀರಿನಾಂಶವನ್ನು ಹೀರಿ ಬೆಳೆಯುವ ಇದು ಅಂತರ್ಜಲಕ್ಕೆ ಮಾರಕ ಎನ್ನಲಾಗುತ್ತಿದೆ. ಆದರೂ ತೋಟಗಳ ಕೃಷಿಕರು, ಕಾಫಿ ಗಿಡಗಳನ್ನು ನೆಡುವ ಸಂದರ್ಭ ಅವುಗಳಿಗೆ ನೆರಳು ಮೂಡಿಸುವ ನಿಟ್ಟಿನಲ್ಲಿ ಸಿಲ್ವರ್ ಹಾಗೂ ಪಾನಿವಾಳದ ಗಿಡಗಳನ್ನು ನೆಡುತ್ತಾರೆ.

ಹೀಗೆ ನೆಟ್ಟು ಬೆಳೆಸಿದ ಅದೇ ಸಿಲ್ವರ್ ಮರದ ಬುಡಕ್ಕೆ ಕಾಳು ಮೆಣಸಿನ ಬಳ್ಳಿಗಳನ್ನು ನೆಟ್ಟು ಬೆಳೆಸುತ್ತಾರೆ.

ನಂತರ ಹದಿನೈದರಿಂದ ಇಪ್ಪತ್ತು ವರ್ಷಗಳು ಕಳೆದ ಆ ಸಿಲ್ವರ್ ಮರಗಳನ್ನು ಕಡಿದು ಮಾರಾಟ ಮಾಡಿ ಕೈ ತುಂಬಾ ಹಣ ಗಳಿಸಿರುವ ಬೆಳೆಗಾರರು ಜಿಲ್ಲೆಯೊಳಗಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಈ ಸಿಲ್ವರ್ ಗೆ ಉತ್ತಮವಾದ ಬೆಲೆ ಇತ್ತು. ಆದರೆ ಈಗ ಈ ಮರಕ್ಕೆ ಬೆಲೆ ಕುಸಿತವಾಗಿದೆ. ಅಂದರೆ ಬೇಡಿಕೆ ತಗ್ಗಿದೆ ಎನ್ನಲಾಗುತ್ತಿದೆ. ಆದರೂ ಕೆಲ ಬೆಳೆಗಾರರು ತಮ್ಮ ಸಂಕಷ್ಟಗಳ ನಿವಾರಣೆಗೆ ಈ ಮರಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇಲ್ಲಿ ಸಿಲ್ವರ್ ಮರಗಳನ್ನು ಕಡಿಯುವಾಗ ಆ ಮರಗಳನ್ನು ನೆಟ್ಟು ಬೆಳಸಿದ ಮಾಲೀಕರಿಗೆ ಒಂದು ಬಗೆಯ ಉಭಯ ಸಂಕಟ ಕಾಡುತ್ತದೆ.

ಅದೇನೆಂದರೆ, ಕಾಫಿ ತೋಟಗಳಲ್ಲಿ ಸಿಲ್ವರ್ ಹೊರತಾದ ಇತರೇ ಮರಗಳು ಹೆಚ್ಚು ಬೆಳೆದ ಸಂದರ್ಭದಲ್ಲಿ ಸಿಲ್ವರ್ ಮರಗಳನ್ನು ಕಡಿದು ಮಾರಾಟ ಮಾಡಿದರೆ ಒಂದಷ್ಟು ಹಣ ಸಿಗುತ್ತದೆ. ಆದರೆ ಆ ಸಿಲ್ವರ್ ಮರಗಳನ್ನು ಕಡಿದುರುಳಿಸಿದರೆ ಅವುಗಳನ್ನು ಅವಲಂಬಿಸಿ ಬೆಳೆಸಿದ ಕಾಳು ಮೆಣಸಿನ ಬಳ್ಳಿಗಳು ಹಾಳಾಗುತ್ತವಲ್ಲ ಎಂಬ ಆತಂಕ ಒಂದೆಡೆಯಾದರೆ, ಆ ಸಿಲ್ವರ್ ಮರಗಳನ್ನು ಕಡಿಯದಿದ್ದರೆ ಕಾಫಿ ಗಿಡಗಳು ಬೆಳವಣಿಗೆಯಾಗುವುದಿಲ್ಲ. ಮತ್ತು ಕಾಫಿಗೆ ಬಾಧಿಸುವ ಕೆಲವು ಸಾಂಕ್ರಾಮಿಕ ರೋಗಗಳು ಹತೋಟಿಗೆ ಬರುವುದಿಲ್ಲ. ಅಲ್ಲದೇ ಆ ಸಿಲ್ವರ್ ಮರಗಳು ಹೆಚ್ಚು ಬೆಳೆದಿರುವಲ್ಲಿ ಆ ಭೂಮಿಯ ಅಂತರ್ಜಲ ಮತ್ತಷ್ಟು ಪಾತಾಳಕ್ಕೆ ಕುಸಿಯುತ್ತದೆ ಎಂಬುದು ಕೆಲವು ಬೆಳೆಗಾರರ ವಾದ.

ಹೀಗೆ ಕಾಫಿ ತೋಟಗಳಲ್ಲಿ ಬೆಳೆದು ನಿಂತ ಸಿಲ್ವರ್ ಮರಗಳನ್ನು ಕಡಿದು ತೆರವು ಮಾಡುವಾಗ ಆ ಮರಗಳ ಆಸುಪಾಸಿನಲ್ಲಿ ಇರುವಂತಹ ಕಾಫಿ, ಮೆಣಸು, ಏಲಕ್ಕಿ, ಕಿತ್ತಳೆ ಮೊದಲಾದ ಫಸಲಿನ ಗಿಡಗಳು ಹಾಳಾಗದಂತೆ ಜಾಗೃತೆ ವಹಿಸಿ ಅವುಗಳ ನಾಟಾಗಳನ್ನು ರಸ್ತೆಗೆ ಸಾಗಿಸಬೇಕು. ನಂತರ ರಸ್ತೆ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಅದರೊಳಗೆ ಮರದ ನಾಟಾಗಳನ್ನು ತುಂಬಿಸಿ ಅಂದವಾಗಿ ಜೋಡಿಸುವ ಕಾಯಕವಿದೆಯಲ್ಲಾ ಅದು ನಿಜಕ್ಕೂ ಶ್ಲಾಘನೀಯ.

ಅಂದರೆ ಆ ಕಠಿಣವಾದ ಕಾಯಕ ಎಲ್ಲಾ ಕಾರ್ಮಿಕರಿಗೂ ಸಾಧ್ಯವಾಗುವುದಿಲ್ಲ. ಅಂದರೆ ಬಹಳ ನೈಪುಣ್ಯತೆಯ ಈ ಕೆಲಸದಲ್ಲಿ ಶಕ್ತಿಯಷ್ಟೇ ಪ್ರಮಾಣದ ಯುಕ್ತಿಯು ಅಡಗಿದೆ.

ನೂರಾರು ಕಿ.ಮೀ. ದೂರ ಕ್ರಮಿಸಬೇಕಾದಂತಹ ಲಾರಿಯೊಂದಕ್ಕೆ ಅದರೊಳಗೆ ತುಂಬಿಸಿ ಜೋಡಿಸಿಡುವ ಮರದ ನಾಟಾಗಳು ಅಲುಗಾಡದಂತೆ ಮತ್ತು ಕೆಳಗೆ ಉರುಳಿ ಬೀಳದಂತೆ ಅಷ್ಟೇ ಕೌಶಲ್ಯದಿಂದ ಜೋಡಿಸುವ ಈ ಶ್ರಮಿಕ ಕಾರ್ಮಿಕರ ಶ್ರಮ ನೋಡುಗರಿಗೆ ಒಂದು ರೀತಿ ಬೇಸರ ಮೂಡಿಸುತ್ತದೆ.

ಒಂದೇ ಸಮನಾದ ಮಾದರಿಯಲ್ಲಿ ಅಷ್ಟೊಂದು ತೂಕವಿರುವ ಮರದ ನಾಟಾಗಳನ್ನು ಭುಜ ಹಾಗೂ ತಲೆ ಮೇಲೆ ಹೊತ್ತೇ ಲಾರಿಯ ಮೇಲೆ ಜೋಡಿಸುವ ಕಾರ್ಮಿಕರಿಗೆ ದಿನವೊಂದಕ್ಕೆ 800 ರೂ.ಗಳಿಂದ 1000 ರೂ.ಗಳನ್ನು ನೀಡಲಾಗುತ್ತದೆ. ಆದರೆ ಇಂತಹ ಕಠಿಣವಾದ ಕೆಲಸ ಮಾಡುವ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿ ಮರದ ನಾಟಾಗಳು ಆಯತಪ್ಪಿ ಉರುಳಿ ಕೈ ಕಾಲುಗಳ ಮೇಲೆ ಬಿದ್ದು ಜೀವ ಹಾನಿಯಾದರೆ ಅದಕ್ಕೆ ತೋಟದ ಮಾಲೀಕನಾಗಲೀ, ಮರವನ್ನು ಖರೀದಿಸಿ ಮಾರಾಟ ಮಾಡುವ ವರ್ತಕನಾಗಲೀ ಹೊಣೆ ಹೊರುವುದಿಲ್ಲ. ಒಂದು ರೀತಿ ಕತ್ತಿಯ ಅಲುಗಿನ ಮೇಲೆ ನಡೆವಂತಹ ಸಾಹಸದ ಕೆಲಸ ಇದಾಗಿರುತ್ತದೆ. ಏನು ಮಾಡೋದು ಹೇಳಿ ನಮ್ ಸಂಕಟ ಹಾಗೂ ಸಂಕಷ್ಟ ಎನ್ನುತ್ತಾರೆ 25 ವರ್ಷಗಳಿಂದ ಈ ಟಿಂಬರ್ ಕೆಲಸ ಮಾಡುತ್ತಿರುವ ಕೆಂಚಮ್ಮನಬಾಣೆಯ ಮಹದೇವ.

ಸಿಲ್ವರ್ ಮರಕ್ಕೆ 8 ರಿಂದ 10 ವರ್ಷಗಳ ಹಿಂದೆ ಒಳ್ಳೆಯ ರೇಟ್ ಇತ್ತು. ಆವಾಗ ತೋಟಗಳಲ್ಲಿ ಬೆಳೆಸಿ ಮಾರಾಟ ಮಾಡಿದ ಅನೇಕ ಮಂದಿ ತೋಟ ಮಾಲೀಕರು ಈ ಸಿಲ್ವರ್ ಮಾರಿಯೇ ತೋಟಗಳಲ್ಲಿ ಅಂದ ಚೆಂದದ ಸೊಗಸಾದ ಮನೆಗಳನ್ನು ಕಟ್ಟಿಕೊಂಡಿದ್ದರು. ಆದರೆ ಈಗ ಸಿಲ್ವರ್ ಮರಕ್ಕೆ ಬೇಡಿಕೆಯೇ ಇಲ್ಲ. ಹತ್ತು ವರ್ಷಗಳ ಹಿಂದೆ ಸಿಲ್ವರ್ ಮರಕ್ಕೆ ಒಂದು ಘನ ಅಡಿಗೆ 475 ರೂಗಳಿಂದ 500 ರೂ ಇತ್ತು. ಈವಾಗ ಕೇವಲ 350 ರಿಂದ 370 ರೂ. ಇದೆ. ಈಗ ಜಿಎಸ್‍ಟಿ ಬಂದ ಮೇಲೆ ಮರ ಬೆಳೆಸಿದವರಿಗೂ, ಖರೀದಿಸಿ ಮಾರಾಟ ಮಾಡುವ ನಮಗೂ ಆದಾಯ ಅನ್ನೋದು ಇಲ್ಲ. ಈವಾಗ ಮಾರುಕಟ್ಟೆಗೆ ಬಂದ ಪ್ಲಾಸ್ಟಿಕ್, ಫೈಬರ್, ಕಬ್ಬಿಣದ ಶೀಟ್‍ಗಳು ಬಂದು ಸಿಲ್ವರ್ ಬೇಡಿಕೆ ತಗ್ಗಿತು. ಜೊತೆಗೆ ಕೊರೊನಾ ಲಾಕ್‍ಡೌನ್ ಕಾರಣದಿಂದ ದೂರದ ನಗರಗಳ ಫ್ಯಾಕ್ಟರಿಗಳಿಗೆ ಸರಬರಾಜು ಆಗುವ ಪ್ರಮಾಣವೂ ಕುಂಠಿತವಾಯಿತು ಎನ್ನುತ್ತಾರೆ ಐಗೂರಿನ ಸಿಲ್ವರ್ ಮರದ ವರ್ತಕ ಮುತ್ತಪ್ಪ.

ಸಿಲ್ವರ್ ಮರಗಳಲ್ಲಿ ಕಾಳು ಮೆಣಸು ಬಳ್ಳಿಗಳನ್ನು ಹಬ್ಬಿಸೋದು ಸುಲಭ. ಆದರೆ ಆ ಬಳ್ಳಿ ಫಲ ಕೊಡೋವರೆಗೂ ಕಾಯೋದು ಕಷ್ಟ. ಇತ್ತ ಹಣಕಾಸು ನಿರ್ವಹಣೆಗೆ ಮರವನ್ನು ಕಡಿಯೋಣ ಎಂದರೆ ಬಳ್ಳಿಗಳು ಹಾಳಾಗುವ ಸಂಕಷ್ಟ. ಕಡಿಯದಿದ್ದರೆ ತೋಟ ನಿರ್ವಹಣೆಗೆ ಕುತ್ತು. ಏನು ಮಾಡೋದು ಎಂಬುದು ಸಣ್ಣ ಹಿಡುವಳಿದಾರರ ತರ್ಕ.

ಸಿಲ್ವರ್ ಮರ ಪರಿಸರ ಸ್ನೇಹಿಯಲ್ಲ. ಈ ಮರಗಳು ಇರುವೆಡೆ ಪರಿಸರ ಸ್ನೇಹಿಯಾದ ಇತರೇ ಮರಗಳು ಬೆಳವಣಿಗೆ ಆಗಲ್ಲ. ಭೂಮಿಯಲ್ಲಿ ಶೀತಾಂಶವೂ ಇರುವುದಿಲ್ಲ. ಜೊತೆಗೆ ಕಾಫಿಗೂ ಬೋರರ್ ಹಾಗೂ ಕಾಂಡಕೊರಕ ಮೊದಲಾದ ರೋಗ ಬಾಧೆ ಇರುವುದನ್ನು ನಾನು ನನ್ನ ತೋಟದಲ್ಲಿ ಗಮನಿಸಿದ್ದೇನೆ ಎಂಬುದು ಗೆಜ್ಜೆಹಣಕೋಡು ಗ್ರಾಮದ ಕಾಫಿ ಬೆಳೆಗಾರ ದಯಾನಂದ ಅವರ ವಾದ. ಹಾಗಾಗಿ ಈ ಹಿಂದೆ ತೋಟ ಬೆಳೆಗಾರರ ಪಾಲಿನ ಕಾಮಧೇನುವಾಗಿದ್ದ ಈ ಸಿಲ್ವರ್ ಮರಗಳು ಬೆಳೆಗಾರನ ಕೈಗೆ ಲಕ್ಷಾಂತರ ರೂ.ಗಳ ಆದಾಯವನ್ನು ಕೊಡುವ ಬೆಳೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತ ಕಂಡಿರುವುದು, ಅಪಾರ ಪ್ರಮಾಣದಲ್ಲಿ ಸಿಲ್ವರ್ ಬೆಳೆದ ಕೃಷಿಕರಲ್ಲಿ ಅಸಹನೆ ಮೂಡಿಸಿದೆ ಎಂದೇ ಹೇಳಬಹುದು.

- ಕೆ.ಎಸ್. ಮೂರ್ತಿ