ನಾಲ್ವರು ಯೋಧರು ಹುತಾತ್ಮ

ಶ್ರೀನಗರ, ನ. 8: ಜಮ್ಮು ಮತ್ತು ಕಾಶ್ಮೀರದ ಮಚಿಲ್ ವಲಯದ ನಿಯಂತ್ರಣ ರೇಖೆಯ (ಎಲ್‍ಒಸಿ) ಉದ್ದಕ್ಕೂ ಒಳನುಸುಳುಕೋರರನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸೇನಾಧಿಕಾರಿ ಸೇರಿದಂತೆ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ವಲಯದಲ್ಲಿನ ನಿಯಂತ್ರಣ ರೇಖೆಯಿಂದ ದೇಶದೊಳಗೆ ನುಗ್ಗಲು ಉಗ್ರರು ಪ್ರಯತ್ನ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ ಗುಂಡಿನ ಚಕಮಕಿ ಬಗ್ಗೆ ವಿವರ ನೀಡಿದ ರಕ್ಷಣಾ ವಕ್ತಾರ ರಾಜೇಶ್ ಕಲಿಯಾ, ಭಾನುವಾರ ಮುಂಜಾನೆ 1 ಗಂಟೆಗೆ ಭದ್ರತಾ ಪಡೆಗಳು ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಚಲನೆಯನ್ನು ಗಮನಿಸಿವೆ. ಶರಣಾಗುವಂತೆ ಭದ್ರತಾ ಪಡೆಗಳು ಸೂಚಿಸಿದರೂ ಒಳನುಸುಳು ಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ನಡೆದು, ಘಟನೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿಸಿದ್ದಾರೆ.

ಹಡಗು ಸಚಿವಾಲಯಕ್ಕೆ ಮರುನಾಮಕರಣ

ಅಹಮದಾಬಾದ್, ನ. 8: ಹಡಗು ಸಚಿವಾಲಯವನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ಗುಜರಾತ್‍ನ ಭಾವ್ನಗರ ಜಿಲ್ಲೆಯ ಘೋಘಾ ಮತ್ತು ಸೂರತ್‍ನ ಹಝಿರಾ ಮಧ್ಯೆ ರೊ-ಪಾಕ್ಸ್ ಹಡಗು ಸೇವೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿದರು. ಈ ಹಡಗು ಸೇವೆಯಿಂದಾಗಿ ಸುಮಾರು 317 ಕಿಲೋ ಮೀಟರ್ ದೂರದ ಪ್ರಯಾಣ ಕಡಿಮೆಯಾಗಿ ಸಮುದ್ರ ಮಾರ್ಗದ ಮೂಲಕ 60 ಕಿಲೋ ಮೀಟರ್ ಪ್ರಯಾಣ ಸಾಗಬಹುದು. ದೇಶದ ಸಮುದ್ರ ಮಾರ್ಗವನ್ನು ಮುಂದಿನ ದಿನಗಳಲ್ಲಿ ಪ್ರಮುಖ ಪ್ರಯಾಣ ಮಾರ್ಗಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು ಆತ್ಮನಿರ್ಭರ ಭಾರತದ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರದ ಪ್ರಯತ್ನಕ್ಕೆ ಮತ್ತೊಂದು ದಿಟ್ಟ ಹೆಜ್ಜೆಯನ್ನಿಡಲಾಗಿದೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರದ ಸಹಕಾರ

ಶಿವಮೊಗ್ಗ, ನ. 8: ಕೋವಿಡ್ -19 ಸಾಂಕ್ರಾಮಿಕ ಕಾಯಿಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನಗರದಲ್ಲಿಂದು ರೋಟರಿ ಕ್ಲಬ್ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ `ಜ್ಞಾನ ದೀವಿಗೆ ಮತ್ತು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರ್ಜಾಲ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಅಡ್ಡಿಯುಂಟಾಗಿರುವುದು ಸರ್ಕಾರದ ಗಮನದಲ್ಲಿದೆ. ಅಂತಹ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಖಾಸಗಿ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮಗಳಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕೋವಿಡ್‍ನಿಂದಾಗಿ ಶಿಕ್ಷಣ ಕ್ಷೇತ್ರ ಸೇರಿದಂತೆ ರಾಜ್ಯದ ಆರ್ಥಿಕತೆಗೆ ತೀವ್ರ ಹಿನ್ನಡೆ ಉಂಟಾಗಿದೆ. ಸರ್ಕಾರ ಈಗಾಗಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆನ್‍ಲೈನ್ ಶಿಕ್ಷಣ ಸೇರಿದಂತೆ ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ. ಇದೀಗ ಜ್ಞಾನ ದೀವಿಗೆ ಕಾರ್ಯಕ್ರಮದಡಿಯಲ್ಲಿ ರಾಜ್ಯದ 2.68 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದು, ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಕಾರ್ಯಕ್ರಮ ಜಾರಿಯಾಗಲಿದೆ ಎಂದರು.

ರಾಷ್ಟ್ರವನ್ನುದ್ದೇಶಿಸಿ ಜೊ ಬೈಡನ್ ಭಾಷಣ

ವಾಷಿಂಗ್ಟನ್, ನ. 8: ಅಮೇರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ದೇಶದಲ್ಲಿ ಕೊರೊನಾ ನಿಯಂತ್ರಿಸಲು ಹಾಗೂ ಹಳಿತಪ್ಪಿದ ಆರ್ಥಿಕ ಪರಿಸ್ಥಿತಿ ಮೆಲೇತ್ತಲು ಹೆಚ್ಚಿನ ಗಮನ ಕೊಡುವುದಾಗಿ ಹೇಳಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಬೈಡನ್ ನಮ್ಮ ಕೆಲಸವು ಕೋವಿಡ್‍ಅನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದರೊಂದಿಗೆ ಪ್ರಾರಂಭವಾಗಲಿದೆ. ಆರ್ಥಿಕ ಸ್ಥಿತಿಯನ್ನು ಪುನಃಸ್ಥಾಪಿಸುವವವರೆಗೆ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಆನಂದಿಸಲು ಸಾಧ್ಯವಾಗದು ಎಂದು ಹೇಳಿದ್ದಾರೆ. ಕೊರೊನಾ ನಿಯಂತ್ರಿಸಲು ವಿಜ್ಞಾನಿಗಳು ಮತ್ತು ತಜ್ಞರ ಗುಂಪನ್ನು ಪರಿವರ್ತನಾ ಸಲಹೆಗಾರರರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ಬಿಡೆನ್ ವಿಶೇಷ ಕಾರ್ಯಪಡೆ ರಚಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಕಾರ್ಯಪಡೆಗೆ ಭಾರತ ಮೂಲದ ಪಿಜಿಷಿಯನ್ ಡಾ. ವಿವೇಕ್‍ಮೂರ್ತಿ ಸಹ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಸೋಮವಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ಭಾರತೀಯರಿಗೆ ಅಮೇರಿಕಾ ನಾಗರಿಕತ್ವ

ವಾಷಿಂಗ್ಟನ್, ನ. 8: ಅಮೇರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೇರಿಕಾ ನಾಗರಿಕತ್ವ ನೀಡಲು ಮುಂದಾಗಿದೆ. ಜೋ ಬೈಡನ್ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್ ಸರ್ಕಾರ ಅನಿವಾಸಿ 5 ಲಕ್ಷ ಭಾರತೀಯರೂ ಸೇರಿದಂತೆ 11 ಲಕ್ಷ ವಿದೇಶಿ ವಲಸಿಗರಿಗೆ ಅಮೆರಿಕ ನಾಗರಿಕತ್ವ ನೀಡುವ ಕುರಿತು ನಿರ್ಧರಿಸಿದೆ. ಅಂತೆಯೇ ನಾಗರಿಕತ್ವ ವಿತರಣೆಗೆ ವಾರ್ಷಿಕ 95,000 ಮಿತಿ ಹೇರಲಾಗಿದ್ದು, ಈ ಕುರಿತಂತೆ ಬೈಡನ್ ಕ್ಯಾಂಪೇನ್ ಪಾಸಲಿಸಿ ಡಾಕ್ಯುಮೆಂಟ್‍ನಲ್ಲಿ ತಿಳಿಸಲಾಗಿದೆ. ಅಮೇರಿಕಾದಲ್ಲಿ ಕೆಲಸಕ್ಕಾಗಿ ಬಂದ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5 ಲಕ್ಷ ವಲಸಿಗರಿದ್ದಾರೆ. ಈ ವಲಸಿಗರಿಗೆ ನಾಗರಿಕತ್ವ ನೀಡಲು ಬೈಡನ್ ಸರ್ಕಾರ ನೀತಿ ಜಾರಿಗೆ ತರಲು ಮುಂದಾಗಿದೆ. ಬೈಡನ್ ಸರ್ಕಾರ ಈ ನೀತಿಯ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬೈಡನ್ ಅವರು, ಕಾಂಗ್ರೆಸ್ ಜೊತೆಗೂಡಿ ಶೀಘ್ರವೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಅಮೇರಿಕಾಕ್ಕೆ ವಲಸೆ ಬರುವ ಉದ್ಯೋಗಸ್ಥರ ಕುಟುಂಬಗಳೂ ಕೂಡ ಒಟ್ಟಿಗೆ ಇರಿಸುವ ಪ್ರಯತ್ನ ಇದಾಗಿದೆ.

ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯ

ನವದೆಹಲಿ, ನ. 8: 2021 ಜ. 1 ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. 2021ರ ಜನವರಿಯಿಂದ ಇದು ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. 2017ರ ಡಿ. 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಈಗ ಈ ವಿನಾಯಿತಿಯನ್ನು ತೆಗೆಯಲಾಗಿದ್ದು ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅಳವಡಿಸಿರಬೇಕೆಂದು ಸರ್ಕಾರ ಸೂಚಿಸಿದೆ.

ಗೋಸ್ವಾಮಿ ಟಲೋಜ ಜೈಲಿಗೆ ಸ್ಥಳಾಂತರ

ಮುಂಬೈ, ನ. 8: ವಾಸ್ತುಶಿಲ್ಪಿ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ, ಅಲಿಬಾಗ್ ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ ಟಲೋಜ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ನವೆಂಬರ್ ನಾಲ್ಕರಿಂದ ನ್ಯಾಯಾಂಗ ಬಂಧನ ದಲ್ಲಿರುವ ಗೋಸ್ವಾಮಿ ವಿರುದ್ಧದ ಎಫ್‍ಐಆರ್‍ನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ. ವಿಚಾರಣಾಧಿಕಾರಿ ಜಮಿಲ್ ಶೇಖ್, ವೋರ್ಲಿಯಲ್ಲಿನ ನಿವಾಸದಲ್ಲಿ ಬುಧವಾರ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ ನಂತರ ಅವರ ಬಳಿಯಿದ್ದ ಮೊಬೈಲ್ ಫೋನ್‍ನ್ನು ವಶಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ. ಇನ್ನೊಂದು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವುದಾಗಿ ಕಂಡು ಬಂದಿದೆ ಎಂದರು.