ಮಡಿಕೇರಿ, ನ. 7: ಕೊಡಗು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಲಕಾವೇರಿಯಲ್ಲಿ 2020ರ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತ ಪ್ರಕರಣದಲ್ಲಿ ಐವರು ಸಾವಿಗೀಡಾದ ದುರಂತ ಪ್ರಕರಣಕ್ಕೆ ಅರಣ್ಯ ಇಲಾಖೆ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ಬಳಸಿ ಇಂಗು ಗುಂಡಿಗಳನ್ನು ತೋಡಿದ್ದೆ ಕಾರಣ ಎಂದು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಈ ಹಿಂದೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸರಕಾರದಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಜರುಗಿಸಬೇಕೆಂದು ಕೊಡಗು ಏಕೀಕರಣ ರಂಗ ಆಗ್ರಹಿಸಿದೆ.ಈ ಬಗ್ಗೆ ಕೊಡಗು ಏಕೀಕರಣ ರಂಗ ಮಾಹಿತಿ ಸಂಗ್ರಹಿಸಿ ನೀಡಿರುವ ಹೇಳಿಕೆ ಈ ರೀತಿ ಇದೆ. ತಾ. 16.11.2015 ರಂದು ಮಡಿಕೇರಿಯ ಕಾವೇರಿ ಹಿತರಕ್ಷಣಾ ಸಮಿತಿ ಬ್ರಹ್ಮಗಿರಿಯಲ್ಲಿ ಗಿಡಮರ ಗಳನ್ನು ನೆಡುವ ಹಾಗೂ ಇಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ತಲಕಾವೇರಿಯ ತೀರ್ಥಕುಂಡಿಕೆಯಲ್ಲಿ ನೀರಿನ ಲಭ್ಯತೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಧರಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆಗಳ ಮುಖ್ಯಸ್ಥರು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳಿಗೆ ತಾ. 20.01.2016ರಂದು ಪತ್ರ ಬರೆದು ಸೂಚಿಸಿದ್ದರು. ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡು ತಲಕಾವೇರಿಯ

(ಮೊದಲ ಪುಟದಿಂದ) ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ಬಳಸಿ ಇಂಗುಗುಂಡಿಗಳನ್ನು ತೋಡಿದ್ದರು. ಪಶ್ಚಿಮ ಘಟ್ಟದ ಶೋಲಾ ಹುಲ್ಲುಗಾವಲುಗಳು ನಿಸರ್ಗ ನಿರ್ಮಿತ ಉತ್ಕøಷ್ಟ ಇಂಗುಗುಂಡಿಗಳು ಎಂಬ ಕನಿಷ್ಟ ಮಾಹಿತಿಯಿಲ್ಲದ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಈ ನೆಪದಲ್ಲಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಶೋಲಾ ಹುಲ್ಲುಗಾವಲುಗಳ ಮೇಲೆ ಬೃಹತ್ ಯಂತ್ರೋಪಕರಣಗಳಿಂದ ದಾಂಧಲೆ ಎಬ್ಬಿಸಿದ್ದರು.

2019ರಲ್ಲ್ಲಿ ತಲಕಾವೇರಿಯ ಬೆಟ್ಟಶ್ರೇಣಿಯಲ್ಲಿ ಅಧ್ಯಯನ ನಡೆಸಿದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‍ಐ) ಇಲ್ಲಿನ ಭೂಪದರಗಳಲ್ಲಿ ಅರಣ್ಯ ಇಲಾಖೆಯ ಕಾಮಗಾರಿಯಿಂದ ಬಿರುಕುವುಂಟಾಗಿರುವುದನ್ನು ಪ್ರಸ್ತಾಪಿಸಿದೆ.

ನಿಯಮ ಉಲ್ಲಂಘನೆ

ಕೆಲ ಅಧಿಕಾರಿಗಳು ಕ್ಷುಲ್ಲಕ ನೆಪವನ್ನೊಡ್ಡಿ ಅರಣ್ಯ ಇಲಾಖೆಯನ್ನು ಪಾರದರ್ಶಕತೆ ವ್ಯಾಪ್ತಿಗೆ ಬರುವುದನ್ನು ವ್ಯವಸ್ಥಿತವಾಗಿ ವಿರೋಧಿಸುತ್ತಿದ್ದಾರೆ. ಅರಣ್ಯ ಇಲಾಖೆ ಇಂದಿಗೂ ಕೂಡ ಕೋಟ್ಯಂತರ ರೂಪಾಯಿಯ ಕಾಮಗಾರಿಗಳನ್ನು ಮತ್ತು ಖರೀದಿಯನ್ನು 1999ರ ಕೆ.ಟಿ.ಪಿ.ಪಿ. ಕಾಯಿದೆಯ ವಿಧಿಗಳನ್ನು ಉಲ್ಲಂಘಿಸಿ ನಡೆಸುತ್ತಿದೆ.

ಭ್ರಷ್ಟಾಚಾರ ಆರೋಪ

ಇದಕ್ಕಾಗಿ ಇತ್ತೀಚೆಗೆ ಬೃಹತ್ ಯಂತ್ರೋಪಕರಣಗಳನ್ನು ಎಗ್ಗಿಲ್ಲದೆ ಅರಣ್ಯ ಪ್ರದೇಶಕ್ಕೆ ನುಗ್ಗಿಸಲಾಗುತ್ತಿದೆ. ಕೋಟ್ಯಾಂತರ ಅನುದಾನವನ್ನು ಈ ರೀತಿಯಲ್ಲಿ ಪಾರದರ್ಶಕವಲ್ಲದ ವ್ಯವಸ್ಥೆಯಲ್ಲಿ, ಉತ್ತರದಾಯಿತ್ವವಿಲ್ಲದೆ ವ್ಯಯಮಾಡುತ್ತಿರುವುದರಿಂದ ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅರಣ್ಯ ಅಧಿಕಾರಿಗಳ ಷಡ್ಯಂತ್ರದಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಸರಿಪಡಿಸಲಾಗದ ಅಪಾಯವನ್ನು ಅರಣ್ಯ ಇಲಾಖೆಯೇ ಮಾಡುತ್ತಿದೆ. ತಲಕಾವೇರಿಯಲ್ಲಿ 2020ರ ಆಗಸ್ಟ್ ತಿಂಗಳಲ್ಲಿ ನಡೆದ ದುರಂತವನ್ನು ಈ ದೃಷ್ಟಿಯಲ್ಲಿ ವಿಶ್ಲೇಷಿಸಬೇಕಿದೆ.

ನಾಗರ ಹೊಳೆಯಲ್ಲಿ ದಂಧೆ

ಕರ್ನಾಟಕ ಅರಣ್ಯ ಇಲಾಖೆಯ ಕೆಲ ಅರಣ್ಯಾಧಿಕಾರಿಗಳ ಈ ರೀತಿಯ ಎಡವಟ್ಟುಗಳು ತಲಕಾವೇರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವವಿಖ್ಯಾತವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಇಂಗುಗುಂಡಿಗಳ ನಿರ್ಮಾಣ, ಕೆರೆಗಳ ಹೂಳೆತ್ತುವ, ಲಂಟಾನ ತೆರವುಗೊಳಿಸುವ, ಹಡ್ಲುಗಳನ್ನು ನಿರ್ವಹಿಸುವ ಹಾಗೂ ಹುಲ್ಲುಗಾವಲು ಬೆಳೆಸುವ ಯೋಜನೆಗಳ ನೆಪದಲ್ಲಿ ಹತ್ತಾರು ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದೆ. ಬೃಹತ್ ಯಂತ್ರೋಪಕರಣಗಳಿಗೆ ಬ್ರಹ್ಮಗಿರಿ ಬೆಟ್ಟದಲ್ಲಿಯಾಗಲೀ, ನಾಗರಹೊಳೆಯ ಕಾಡುಗಳಲ್ಲಿಯಾಗಲೀ ಯಾವ ಕೆಲಸವೂ ಇಲ್ಲ. ಬೃಹತ್ ಯಂತ್ರೋಪಕರಣಗಳು ಅಂತಿಮವಾಗಿ ಅರಣ್ಯದ ಸಮತೋಲನಕ್ಕೆ ಪೂರಕವಾದ ಅಸಂಖ್ಯ ಸಸ್ಯಸಂಕುಲಗಳನ್ನು, ಜೀವಜಂತುಗಳನ್ನು ಕೆಲವೇ ಕ್ಷಣಗಳಲ್ಲಿ ಸರ್ವನಾಶಮಾಡಬಲ್ಲವು. ನೈಸರ್ಗಿಕ ಅರಣ್ಯಗಳನ್ನು ಸಂರಕ್ಷಿಸುವುದು ಅರಣ್ಯ ಇಲಾಖೆಯ ಪ್ರಾಥಮಿಕ ಕರ್ತವ್ಯವಾಗಿದೆ ಎಂಬ ಪರಿಕಲ್ಪನೆಯೇ ಇಲ್ಲದ ಅರಣ್ಯಾಧಿಕಾರಿಗಳು ಅನುದಾನವನ್ನು ಬಳಸುವ ಉಮೇದಿನಲ್ಲಿ ನಿರಂತರವಾಗಿ ಅರಣ್ಯ ಧ್ವಂಸದ ಕೆಲಸದಲ್ಲಿ ತೊಡಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಇಲಾಖೆಯ ಯಂತ್ರಗಳನ್ನು ಬಳಸಿ ನಡೆಸುತ್ತಿರುವ ನಿರಂತರ ದಾಂಧಲೆಯಿಂದ ದಕ್ಷಿಣ ಕೊಡಗಿನಲ್ಲಿ ಕಾಡಾನೆಗಳ ಧಾಳಿ ಹೆಚ್ಚಾಗಲು ಕಾರಣವಾಗುತ್ತಿದೆ.

ಸರಕಾರಕ್ಕೆ ಒತ್ತಾಯ

ಕೊಡಗು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಲಕಾವೇರಿಯಲ್ಲಿ 2020ರ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತ ಪ್ರಕರಣದಲ್ಲಿ ಐವರು ಸಾವಿಗೀಡಾಗಲು ನೇರವಾಗಿ ಕಾರಣವಾದ ಅವೈಜ್ಞಾನಿಕ, ಅನಗತ್ಯದ ಇಂಗು ಗುಂಡಿ ತೋಡುವ ಕಾಮಗಾರಿಯನ್ನು ಜಾರಿಗೆ ತಂದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಚೋದನೆಗಾಗಿ ಭಾರತೀಯ ದಂಡ ಸಂಹಿತೆಯ ಪ್ರಕಾರ ಮೊಕದ್ದಮೆ ಹೂಡುವುದು. ಈ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಸರಕಾರದ ಮೇಲೆ ಅಗತ್ಯ ಒತ್ತಡ ಹೇರುವಂತೆ ನಾವು ಒತ್ತಾಯಿಸುತ್ತೇವೆ.

ಅರಣ್ಯ ಪ್ರದೇಶಗಳಲ್ಲಿ ಇಂಗುಗುಂಡಿಗಳ ನಿರ್ಮಾಣ, ಕೆರೆಗಳ ಹೂಳೆತ್ತುವ, ಲಂಟಾನ ತೆರವುಗೊಳಿಸುವ, ಹಡ್ಲುಗಳನ್ನು ನಿರ್ವಹಿಸುವ ಹಾಗೂ ಹುಲ್ಲುಗಾವಲು ಬೆಳೆಸುವ ಯೋಜನೆಗಳ ನೆಪದಲ್ಲಿ ಅರಣ್ಯ ಇಲಾಖೆ ಬೃಹತ್ ಯಂತ್ರೋಪಕರಣಗಳನ್ನು ಬಳಸುವುದನ್ನು ನಿಷೇಧಿಸುವುದು. ಕರ್ನಾಟಕ ಅರಣ್ಯ ಇಲಾಖೆಯ ಎಲ್ಲಾ ಕಾಮಗಾರಿ ಮತ್ತು ಖರೀದಿಯನ್ನು 1999ರ ಕೆ.ಟಿ.ಪಿ.ಪಿ. ಕಾಯಿದೆಯ ವ್ಯಾಪ್ತಿಗೆ ತರುವುದು.

ತಜ್ಞರ ಸಮಿತಿಗೆ ಒತ್ತಾಯ

ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚಿನ ಯೋಜನೆಗಳು ತೆರಿಗೆದಾರರಿಂದ ಸಂಗ್ರಹಿಸಿದ ಅನುದಾನವನ್ನು ದುರುಪಯೋಗ ಮಾಡುವ ಹಾಗೂ ಭ್ರಷ್ಟಾಚಾರಕ್ಕೆ ಎಡೆ ಮಾಡುವ ರೀತಿಯಲ್ಲಿ ರೂಪಿಸಿರುವುದರಿಂದ ಅವುಗಳ ಅಗತ್ಯದ ಪುನರ್ಪರಿಶೀಲನೆಗೆ ತಜ್ಞರ ಸಮಿತಿ ರಚಿಸುವಂತೆಯೂ ಒತ್ತಾಯಿಸಲಾಗಿದೆ.

ಕೋವಿಡ್-19ರ ಹಿನ್ನೆಲೆಯಲ್ಲಿ ಅನುದಾನದ ಕೊರತೆ ಎದುರಿಸುತ್ತಿರುವ ಸರಕಾರ ಅರಣ್ಯ ಇಲಾಖೆಗೆ ವನ್ಯಜೀವಿ ಸಂರಕ್ಷಣೆ, ಮಾನವ- ವನ್ಯಜೀವಿ ಸಂಘರ್ಷ ತಡೆ, ಸ್ವಯಂಪ್ರೇರಿತ ಪುನರ್ ವಸತಿಯಂತಹ ಯೋಜನೆಗಳನ್ನು ಹೊರತು ಪಡಿಸಿ; ಇತರ ಅನಗತ್ಯವಾದ ಯೋಜನೆಗಳ ಅನುದಾನವನ್ನು ತಡೆಹಿಡಿಯಬೇಕು ಎಂದು ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.