ಮಡಿಕೇರಿ, ನ. 7: ಮಡಿಕೇರಿಯ ಸ್ಟೋನ್‍ಹಿಲ್ ಬೆಟ್ಟ ಶ್ರೇಣಿಯಲ್ಲಿ ನಗರಸಭೆಯಿಂದ ಕಸ ವಿಲೇವಾರಿಗೆ ಕೆಲವರು ಆಕ್ಷೇಪಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿರುವ ಪ್ರಕರಣ ಹಿನ್ನೆಲೆಯಲ್ಲಿ, ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆಗೆ ಚಿಂತನೆ ನಡೆಯುತ್ತಿದೆ ಎಂದು ಪೌರಾಯುಕ್ತ ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಕಸ ನಿರ್ವಹಣೆ ಸಮಸ್ಯೆ ಬಗ್ಗೆ ಗಮನ ಸೆಳೆದಾಗ; ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.ಸ್ಟೋನ್‍ಹಿಲ್ ಬಳಿ ಈಗಿರುವ ಕಸ ವಿಲೇವಾರಿ ಘಟಕ ಹೊರತಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗದ ಕೊರತೆ ಇದೆ ಎಂದು ನುಡಿದ ಪೌರಾಯುಕ್ತರು, ಈಗಿರುವ ಸ್ಥಳವನ್ನು ವೈಜ್ಞಾನಿಕ ರೀತಿಯಲ್ಲಿ ಜನತೆಗೆ ತೊಂದರೆ ಆಗದಂತೆ ಉಪಯೋಗಿಸಿಕೊಳ್ಳಲು ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.ವಾರ್ಡ್‍ವಾರು ವ್ಯವಸ್ಥೆ: ಮಡಿಕೇರಿಯ 23 ವಾರ್ಡ್‍ಗಳಲ್ಲಿ ಸಣ್ಣ ಪ್ರಮಾಣದಿಂದ ಅಲ್ಲಲ್ಲಿ ಕಸ ವಿಂಗಡಿಸಿ, ಗೊತ್ತು ಪಡಿಸಿದ ಏಜೆನ್ಸಿ ಅಥವಾ ಸಿಮೆಂಟ್
(ಮೊದಲ ಪುಟದಿಂದ) ಕಾರ್ಖಾನೆಗೆ ಸರಬರಾಜುಗೊಳಿಸಲು ಸಮಾಲೋಚನೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದುವರಿಯಲಾಗುವದು ಎಂದು ಮಾಹಿತಿ ನೀಡಿದರು.ದಾಸವಾಳ ಘಟಕ : ನಗರದ ಹಳೆಯ ದಾಸವಾಳ ಕೆರೆ ವ್ಯಾಪ್ತಿಯ 75 ಸೆಂಟ್ ಜಾಗವನ್ನು ಸದ್ಯ ಕಸ ಪರಿಷ್ಕರಣೆಗೆ ಬಳಸಿಕೊಳ್ಳಲಾಗುವದು ಎಂದು ನುಡಿದ ಅವರು, ಒಣ ಕಸವನ್ನು ನೇರವಾಗಿ ಅಲ್ಲಿಂದಲೇ ಮರು ಬಳಕೆಗಾಗಿ ಸಿಮೆಂಟ್ ಕಾರ್ಖಾನೆಗೆ ಒಯ್ಯಲು ಯೋಜನೆ ಕೈಗೊಳ್ಳಲಾಗುತ್ತಿದೆ ಎಂಬದಾಗಿ ತಿಳಿಸಿದರು. ಇನ್ನು ಹಸಿ ಕಸವನ್ನು ಸ್ಟೋನ್‍ಹಿಲ್ ಬಳಿ ಗೊಬ್ಬರ ಘಟಕಕ್ಕೆ ಸಾಗಿಸಿ, ಅಗತ್ಯ ಗೊಬ್ಬರ ತಯಾರಿಸಿ ಸದ್ಭಳಕೆ ಮಾಡಿಕೊಳ್ಳಲಾಗುವದು ಎಂದು ಅವರು ವಿವರಿಸಿದರು. ಅಲ್ಲದೆ ಪ್ರತಿಯೊಬ್ಬ ನಾಗರಿಕರು ಹಸಿ ಕಸವನ್ನು ತಮ್ಮ ತಮ್ಮ ಮನೆಗಳಲ್ಲಿ ಗೊಬ್ಬರಕ್ಕೆ ಬಳಸಿಕೊಂಡು ಹೂಕುಂಡ ಇತ್ಯಾದಿಗೆ ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಜಾಗೃತರಾಗಬೇಕು : ಮಡಿಕೇರಿಯ ಸುಮಾರು 8500 ಕುಟುಂಬಗಳ ಮಂದಿ ತಮ್ಮ ತಮ್ಮ ಮನೆಯ ಕಸದಿಂದ ಬೇರೆಯವರಿಗೆ ತೊಂದರೆ ಆಗದಂತೆ ಜಾಗೃತರಾಗಬೇಕು; ಕಸ ಸಂಗ್ರಹ ವಾಹನಗಳಿಗೆ ನೇರವಾಗಿ ತಮ್ಮ ಮನೆ ಕಸ ತಲಪಿಸಲು ಸಾಧ್ಯವಾಗದಿದ್ದರೆ, ಅಕ್ಕಪಕ್ಕದ ಮಂದಿ ಬಳಿ ಅಚ್ಚುಕಟ್ಟಾಗಿ ಚೀಲದಲ್ಲಿ ತುಂಬಿ ವಾಹನಗಳು ಬರುವಾಗ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಹಾದಿ - ಬೀದಿ ಸಮಸ್ಯೆ : ಅನೇಕರು ತಮ್ಮ ಕೆಲಸಗಳಿಗೆ ತೆರಳುವ ವೇಳೆ ಮನೆ ಕಸವನ್ನು ನೇರವಾಗಿ ವಾಹನಗಳಿಗೆ ನೀಡದೆ, ಹಾದಿ ಬೀದಿಯಲ್ಲಿ ಇಟ್ಟು ಹೋಗುತ್ತಿದ್ದಾರೆ; ಪರಿಣಾಮ ಬೀದಿ ನಾಯಿಗಳ ಕಾಟದಿಂದ ಅಲ್ಲಲ್ಲಿ ಕಸ ಹರಡಲು ಕಾರಣವಾಗುತ್ತಿದ್ದಾರೆ. ಇದು ಸರಿಯಲ್ಲವೆಂದು ಪೌರಾಯುಕ್ತರು ನೆನಪಿಸಿದರು.
ಸಿ.ಸಿ. ಕ್ಯಾಮರಾ : ಭವಿಷ್ಯದಲ್ಲಿ ಎಲ್ಲೆಡೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ; ಈ ರೀತಿ ಕಸ ವಿಲೇವಾರಿಯಲ್ಲಿ ಅಸಡ್ಡೆ ತೋರುವವರ ವಿರುದ್ಧ ಕಾನೂನು ಕ್ರಮದೊಂದಿಗೆ ಅಂತಹವರಿಗೆ ದಂಡ ವಿಧಿಸಲಾಗುವದು ಎಂದು ರಾಮದಾಸ್ ಎಚ್ಚರಿಸಿದರು.
ಒಟ್ಟಿನಲ್ಲಿ ಮಡಿಕೇರಿ ನಗರದಲ್ಲಿ ಕಸ ನಿರ್ವಹಣೆ ಸಮಸ್ಯೆಗೆ ತಾರ್ಕಿಕ ಅಂತ್ಯಹಾಡಲು ನಗರಸಭೆ ಗಂಭೀರವಾಗಿ ಪ್ರಯತ್ನಿಸುತ್ತಿದೆ; ಭವಿಷ್ಯದಲ್ಲಿ ನ್ಯಾಯಾಲ ಯದ ನಿರ್ದೇಶನವನ್ನು ಗಮನದಲ್ಲಿ ಇರಿಸಿಕೊಂಡು ಕಸ ಸಮಸ್ಯೆಗೆ ಪರ್ಯಾಯ ಯೋಜನೆ ಕಂಡುಕೊಳ್ಳಲಾಗುವದು ಎಂದು ಅವರು ಭರವಸೆ ನೀಡಿದರು.