ಕೂಡಿಗೆ, ನ. 6: ಹಾರಂಗಿ ಅಣೆಕಟ್ಟೆಯ ಮುಂಭಾಗದ ತೋಟಗಾರಿಕಾ ಇಲಾಖೆಯು ರೂ. 42 ಲಕ್ಷ ಅನುದಾನವನ್ನು ಬಳಕೆ ಮಾಡಿ ಕಳೆದ ಸಾಲಿನಲ್ಲಿ 60 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಲಿನಲ್ಲಿ ಅಭಿವೃದ್ಧಿ ಪ್ರಗತಿ ಪರಿಶೀಲನೆ ಅಧಾರದ ಮೇಲೆ ಸರಕಾರದಿಂದ ಹಾರಂಗಿ ಕ್ಷೇತ್ರದ 50 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಈಗಾಗಲೇ ರೂ. 53 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
ತೋಟಗಾರಿಕಾ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಇದೀಗ ತೆಂಗು, ಸಪೆÇೀಟ, ಸೀಬೆ, ಕಾಳುಮೆಣಸು, ಕಿತ್ತಳೆ, ಬೆಣ್ಣೆಹಣ್ಣು ಜೊತೆಗೆ ಶುಂಠಿ ಬೇಸಾಯವನ್ನು ಮಾಡಲಾಗಿದೆ. ಈ ಕೇಂದ್ರದಲ್ಲಿ ಹೊಸದಾಗಿ ಗಿಡಗಳನ್ನು ನೆಡುವುದರ ಜೊತೆಗೆ ಹೊಸ ತಳಿಯ ಗಿಡಗಳನ್ನು ನೆಟ್ಟು ಅವುಗಳಿಗೆ ಹನಿ ನೀರಾವರಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರದಲ್ಲಿ 2018-19ನೇ ಸಾಲಿನಲ್ಲಿ 2.5 ಲಕ್ಷ ಸಸಿ ಅಭಿವೃದ್ಧಿಪಡಿಸಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಮುಖೇನ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ವಿತರಣೆ ಮಾಡಲಾಗಿದೆ.
ಈ ಕೇಂದ್ರದಲ್ಲಿ ನೂತನವಾಗಿ ವಿಯಟ್ನಾಂ ತಾಂತ್ರಿಕತೆಯ ಪದ್ಧತಿಯನ್ನು ಉಪಯೋಗಿಸಿ ಒಂದು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲು ಮುಂದಾಗಿದೆ. ಅದರಂತೆ ಕಾಳು ಬಳ್ಳಿಯನ್ನು ಬೆಳೆಯಲು ಎರಡು ಮೀಟರ್ ಅಂತರಕ್ಕೆ ಸಿಮೆಂಟ್ ಕಂಬಗಳನ್ನು ನೆಡಲಾಗಿದೆ. ಅವುಗಳ ಮೂಲಕ ಚಪ್ಪರ ಮಾದರಿಯಲ್ಲಿ ಬೆಳೆಸಿ ಬಳ್ಳಿಯನ್ನು ಕಟಾವು ಮಾಡಿ ಬಿಡಿ ಗಿಡಗಳನ್ನು ಮಾಡಲು ಯೋಜನೆ ನಡೆಯುತ್ತಿದೆ. ಅಲ್ಲದೆ ಮೆಣಸು ಕಡ್ಡಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಈ ಕ್ಷೇತ್ರದಲ್ಲಿ ಮೂರು ಕೊಳವೆ ಬಾವಿ ಕೊರೆಸಲಾಗಿದೆ. ನೀರು ಸಂಗ್ರಹವಾಗಲು ಮತ್ತು ಸದುಪಯೋಗಕ್ಕೆ ಕೃಷಿ ಹೊಂಡವನ್ನು ತೆಗೆಯಲಾಗಿದೆ. ಈ ಕೃಷಿ ಹೊಂಡಕ್ಕೆ ರಾಷ್ಟ್ರ ಮತ್ತು ನೂತನ ತಾಂತ್ರಿಕತೆಯಲ್ಲಿ ನೀರು ಸಂಗ್ರಹವಾಗಿ 10 ಹೆಚ್‍ಪಿ ಮೋಟಾರ್ ಬಳಸಿ ಏಕಕಾಲದಲ್ಲಿ 65 ಸಾವಿರ ಲೀಟರ್ ನೀರು ಕ್ಷೇತ್ರದ ಎಲ್ಲಾ ಸಸಿಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ವಿವಿಧ ಗಿಡಗಳು ಮತ್ತು ಫಸಲು ತೋಟಗಾರಿಕಾ ನಿಯಮನುಸಾರ ಮಾರಾಟ ಮಾಡಿ ರೂ. 32 ಲಕ್ಷದ 98 ಸಾವಿರ ಆದಾಯ ಈ ಕ್ಷೇತ್ರದಿಂದ ಬಂದಿದೆ ಎಂದು ಹಾರಂಗಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ಎಸ್. ವರದರಾಜ್ ತಿಳಿಸಿದರು.