ಕೂಡಿಗೆ, ನ. 6: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರಾಣದ ಕಾಮಗಾರಿಯು ಇದೀಗ ಸ್ಥಗಿತಗೊಂಡು ಕಾಡುಮಯವಾಗಿದೆ.

ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದವರು ಕೂಡಿಗೆ ಕೇಂದ್ರದಲ್ಲಿ 12 ಕೋಟಿ ವೆಚ್ಚದಲ್ಲಿ ಉಗ್ರಾಣದ ಕಾಮಗಾರಿಯನ್ನು ಪ್ರಾರಂಭಿಸಿ ನಾಲ್ಕು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಳ್ಳದೆ ಪಾಳುಬಿದ್ದ ಸ್ಮಾರಕದಂತೆ ಇದೆ.

ಜಿಲ್ಲೆಯ ಎಲ್ಲಾ ಕೇಂದ್ರಗಳಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಡಿತರ ವಸ್ತುಗಳು ಮತ್ತು ರಾಸಾಯನಿಕ ಗೊಬ್ಬರಗಳ ದಾಸ್ತಾನು ಇಡಲು ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಹಣವನ್ನು 2016-17ನೇ ಸಾಲಿನಲ್ಲಿ ಬಿಡುಗಡೆ ಮಾಡಿತು. ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಬೃಹತ್ ಗೋದಾಮು ನಿರ್ಮಾಣ ಮಾಡಲು 12 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ನೀಲಿ ನಕ್ಷೆಯನ್ನು ತಯಾರಿಸಿ ಕಾಮಗಾರಿಯನ್ನು ಪ್ರಾರಂಭಿಸಿದ್ದರೂ ಇದುವರೆಗೂ ಮುಕ್ತಾಯ ಹಂತವನ್ನು ತಲುಪಿಲ್ಲ.ಇದರ ಕಾಮಗಾರಿ ಟೆಂಡರ್ ಮುಖೇನ ಹೈದರಾಬಾದ್ ಗುತ್ತಿಗೆದಾರ ಪಡೆದು ಅರ್ಧ ಭಾಗದಷ್ಟು ಕೆಲಸ ನಡೆದು ಸ್ಥಗಿತಗೊಂಡಿದೆ.

ಈ ಹಿನ್ನೆಲೆ ಕಟ್ಟಡ ಕಾಡುಮಯವಾಗಿದೆ. ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

-ಕೆ.ಕೆ.ಎನ್.