ಕೂಡಿಗೆ, ನ. 6: ಸಣ್ಣ ಮತ್ತು ಅತಿ ಸಣ್ಣ ರೈತರುಗಳಿಗೆ ಕೋವಿಡ್-19ರ ನೆರವು ನೀಡುವ ಯೋಜನೆಯ ಮೂಲಕ ರೈತ ಉತ್ಪಾದಕರ ಯೋಜನೆಯ ವತಿಯಿಂದ ಜನಾಭಿವೃದ್ಧಿ ಸಂಸ್ಥೆ (ಓಡಿಪಿ) ಮೈಸೂರು ಇವರ ವತಿಯಿಂದ ಕೂಡಿಗೆ ಭಾಗದ ರೈತರಿಗೆ ಉಚಿತವಾಗಿ ಗೊಬ್ಬರವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್. ಮಂಜುಳ ನೆರವೇರಿಸಿ ಮಾತನಾಡಿ, ರೈತರು ರೈತ ಉತ್ಪಾದಕ ಸಮಿತಿಗಳ ರಚನೆಯ ಮೂಲಕ ತಮಗೆ ಸಿಗುವ ಸೌಲಭ್ಯ ಮತ್ತು ಮಾಹಿತಿಯನ್ನು ಪಡೆದು ತಮ್ಮ ಬೇಸಾಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಮುಂದಾಗಬೇಕು. ಓಡಿಪಿ ಸಂಸ್ಥೆಯು ಹಮ್ಮಿಕೊಂಡಿರುವ ಯೋಜನೆಯ ಕಾರ್ಯಚಟುವಟಿಕೆಗಳು ರೈತರಿಗೆ ಅನುಕೂಲಕರವಾಗುತ್ತದೆ ಇದರ ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ಸರಕಾರದ ವಿವಿಧ ಯೋಜನೆಯ ವಿವಿಧ ಇಲಾಖೆಯ ಮೂಲಕ ಬಳಸಿಕೊಳ್ಳಲು ಕರೆ ನೀಡಿದರು.
ಜಿಲ್ಲಾ ಸಂಯೋಜಕ ಜಾನ್ ಮಾತನಾಡಿ, ರಾಜ್ಯದ 4 ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಸಬಲೀಕರಣ ಜೊತೆಯಲ್ಲಿ ರೈತಾಪಿ ವರ್ಗದ ಅಭಿವೃದ್ಧಿಗಾಗಿ ಪುರುಷ ಸಂಘಗಳನ್ನು ರಚನೆ ಮಾಡಿ ಸಂಘಟಿಸಿ ಬಲವರ್ಧನೆ ಮಾಡಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿವಿಧ ಯೋಜನೆಯ ಮೂಲಕ ಸಹಾಯ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂಮಿಕ ಸಂಘದ ಅಧ್ಯಕ್ಷ ಹೊನ್ನಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ತಮ್ಮಣೇಗೌಡ, ಭೂಮಿಕ ಸಂಘದ ಕಾರ್ಯದರ್ಶಿ ವಿಲಾಸಿನಿ, ಸಂಸ್ಥೆಯ ಸ್ಥಳೀಯ ಸಂಯೋಜಕ ಲೋಕೇಶ್, ಸುಂದರದಾಸ್ ಸೇರಿದಂತೆ ನೋಂದಾಯಿತ ರೈತ ಸದಸ್ಯರು ಹಾಜರಿದ್ದರು. ಈ ಸಂದರ್ಭ 22 ಜನ ರೈತ ಸದಸ್ಯರುಗಳಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡಲಾಯಿತು.