ಸೋಮವಾರಪೇಟೆ, ನ. 6: ಕೊರೊನಾ ಲಾಕ್‍ಡೌನ್ ಸಂದರ್ಭ ವೈವಿಧ್ಯಮಯ ರೀತಿಯಲ್ಲಿ ಹಲವಾರು ವಿವಾಹಗಳು ನಡೆದಿವೆ. ಇದೀಗ ಸೋಮವಾರಪೇಟೆಯ ಯುವಕ ಗೌತಮ್, ತನ್ನ ಮದುವೆಯನ್ನು ಮಾದರಿಯಾಗಿ ನೆರವೇರಿಸಲು ಸಿದ್ಧತೆ ಕೈಗೊಂಡಿದ್ದಾರೆ.

ತಾ. 8ರಂದು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕೆಲವೇ ಕೆಲವು ಆಹ್ವಾನಿತರ ಸಮ್ಮುಖದಲ್ಲಿ ಆರತಕ್ಷತೆ ನೆರವೇರಿಸಿಕೊಳ್ಳಲು ಸಿದ್ಧತೆಯಲ್ಲಿರುವ ಪಟ್ಟಣ ಸಮೀಪದ ಕಿರಗಂದೂರು ಗ್ರಾಮದ ಯುವಕ ಗೌತಮ್ ಹಾಗೂ ಅರಕಲಗೂಡಿನ ಸುಮನ ಅವರು, ಆರತಕ್ಷತೆಯ ದಿನದಂದು ದೇಹದಾನದ ಪ್ರತಿಜ್ಞೆಯೊಂದಿಗೆ, ನೇತ್ರದಾನ ಜಾಗೃತಿ-ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.

ಸರಳತೆಯೊಂದಿಗೆ ತೀರಾ ಅಪರೂಪವೆಂಬಂತೆ ಕಾರ್ಯ ಕ್ರಮವನ್ನು ಆಯೋಜಿಸಿದ್ದು, ಅಂದು ವಧು ವರರಿಂದ ದೇಹದಾನ ಪ್ರತಿಜ್ಞೆ, ನೇತ್ರದಾನ ಜಾಗೃತಿ ಹಾಗೂ ಸದಸ್ಯತ್ವ ಅಭಿಯಾನ, ಆಹ್ವಾನಿತರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇದರೊಂದಿಗೆ ಸುಮನ ಅರಕಲಗೂಡು ರಚಿತ ‘ಪರಿಣಯ’ ಕವನಸಂಕಲನದ ಬಿಡುಗಡೆಯೂ ನಡೆಯಲಿದೆ.

ಕವನ ಸಂಕಲನ ಬಿಡುಗಡೆ-ಜಾಗೃತಿ ಕಾರ್ಯಕ್ರಮದಲ್ಲಿ ಉದ್ಯಮಿ, ಸೇವಾರತ್ನ ಪ್ರಶಸ್ತಿ ಪುರಸ್ಕøತ ಹರಪಳ್ಳಿ ರವೀಂದ್ರ, ಬೆಂಗಳೂರು ಮುನ್ಸಿಪಲ್ ಡೇಟಾ ಸೊಸೈಟಿ ಜಂಟಿ ನಿರ್ದೇಶಕ ರಾದ ಕೆ.ಎಂ.ಜಾನಕಿ, ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಪೈಟರ್ ಗಿರೀಶ್ ಆರ್.ಗೌಡ, ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ಹಾಸನ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಾಮಾಲಾ, ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಚ್.ಜೆ. ಜವರಪ್ಪ, ಅರಕಲಗೂಡು ತಾಲೂಕು ಅಧ್ಯಕ್ಷ ಎಂ.ಎಲ್. ವಿಷ್ಣುಪ್ರಕಾಶ್, ಸಾಹಿತಿಗಳಾದ ಪಿ.ಎಸ್. ವೈಲೇಶ್, ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗಶಾಸ್ತ್ರ ವಿಭಾಗದ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ನೇತ್ರಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ.ಕಿರಣ್‍ಭಟ್ ಅವರುಗಳು ಭಾಗವಹಿಸಲಿದ್ದಾರೆ.

ಮದುವೆಯ ದಿನದಂದೇ ನೇತ್ರದಾನ-ದೇಹದಾನದ ಪ್ರತಿಜ್ಞೆಗೆ ಮುಂದಾಗಿರುವ ವಧೂವರರ ತೀರ್ಮಾನಕ್ಕೆ ಅವರುಗಳ ಪೋಷಕರೂ ಸಹ ಸಮ್ಮತಿ ಸೂಚಿಸಿದ್ದಾರೆ.

‘ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನವೆಂದರೆ ರಕ್ತದಾನ, ನೇತ್ರದಾನ, ಅಂಗಾಂಗ ದಾನವಾಗಿದೆ. ನಾವು ಬದುಕಿದ್ದಾಗಲೇ ರಕ್ತದಾನ ಮಾಡಬಹುದು. ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ದೇಹವನ್ನು ದಾನ ಮಾಡಲು ಬದುಕಿ ರುವಾಗಲೇ ನೋಂದಣಿ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ನೇತ್ರದಾನ-ದೇಹದಾನಕ್ಕೆ ಮುಂದಾಗಲಿ, ಆ ಮೂಲಕ ನಮ್ಮ ಮರಣಾನಂತರ ಇನ್ನೊಬ್ಬರ ಬಾಳಿಗೆ ಬೆಳಕು ನೀಡುವಂತಾಗಲಿ ಎಂಬ ಉದ್ದೇಶದಿಂದ ಆರತಕ್ಷತೆ ದಿನದಂದೇ ಇಂತಹ ಪ್ರತಿಜ್ಞೆ ಕೈಗೊಂಡು ಇತರರಿಗೂ ಪ್ರೇರಣೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಗೌತಮ್ ತಿಳಿಸಿದ್ದಾರೆ. ಈ ಜೋಡಿಗೊಂದು ನಿಮ್ಮ ಶುಭಹಾರೈಕೆಯೂ ಇರಲಿ.

- ವಿಜಯ್ ಹಾನಗಲ್