ಮಡಿಕೇರಿ, ನ. 6: ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಕೊಂಡಿರುವ ಜಾತ್ಯತೀತ ಹಣೆಪಟ್ಟಿಯ ಜನತಾದಳ ಒಂದು ಮತೀಯ ಪಕ್ಷವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಎಲ್ಲೂ ಬಹುಮತವಿರಲಿಲ್ಲ; ಆದರೆ ಅಧಿಕಾರಕ್ಕಾಗಿ ವಾಮಮಾರ್ಗ ವನ್ನು ಅನುಸರಿಸಿದ ಆ ಪಕ್ಷಕ್ಕೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ತನ್ನ ಮತೀಯವಾದವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಗಳು ಪಕ್ಷದ ಸಿದ್ಧಾಂತದ ಬಗ್ಗೆ ಒಂದು ರೀತಿಯ ಹೇಳಿಕೆಯನ್ನು ನೀಡಿದರೆ ಅದಕ್ಕೆ ವ್ಯತಿರಿಕ್ತವಾಗಿ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇವರ ಕುಟುಂಬದಲ್ಲಿಯೇ ರಾಜಕೀಯ ಗೊಂದಲಗಳಿದ್ದು, ಪಕ್ಷದಲ್ಲಿ ಜಾತ್ಯತೀತ ಎನ್ನುವ ಪದಕ್ಕೆ ಅರ್ಥವೇ ಇಲ್ಲದಾಗಿದೆ ಎಂದು ಮಂಜುನಾಥ್‍ಕುಮಾರ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿತ್ತು, ಆದರೆ ಕುಶಾಲನಗರದಲ್ಲಿ ಮಾತ್ರ ಜನತಾದಳದ ಮತೀಯ ಭಾವನೆ ಪ್ರತಿಬಿಂಬಿತವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಿದವರಿಗೆ ಅಲ್ಲಿ ಸಿಕ್ಕಿದ್ದು ಕೂಡ ಉಪಾಧ್ಯಕ್ಷ ಸ್ಥಾನ ಎಂದರು.

ಸ್ಪಷ್ಟ ಬಹುಮತವಿಲ್ಲದ ಬಿಜೆಪಿ ಮೀಸಲಾತಿಯನ್ನು ತನಗೆ ಬೇಕಾದ ಹಾಗೆ ಘೋಷಿಸಿಕೊಂಡು ವಾಮಮಾರ್ಗ ಹಿಡಿದರೂ ಕಾಂಗ್ರೆಸ್‍ನ ಒಬ್ಬನೇ ಒಬ್ಬ ಸದಸ್ಯನನ್ನು ತನ್ನೆಡೆಗೆ ಸೆಳೆದುಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಇದು ಕಾಂಗ್ರೆಸ್ ಸದಸ್ಯರ ಪಕ್ಷ ನಿಷ್ಠೆ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಜಿಲ್ಲಾ ಸಮಿತಿ ಸದಸ್ಯೆ ಗೀತಾ ಧರ್ಮಪ್ಪ ಹಾಗೂ ಎಸ್‍ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರ ಉಪಸ್ಥಿತರಿದ್ದರು.