ಗೋಣಿಕೊಪ್ಪ ವರದಿ, ನ. 6: ಬದಲಾದ ಜೀವನಶೈಲಿಯ ನಡುವೆ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆ ವೈದ್ಯೆ ಡಾ. ಎಂ. ಸ್ಪೂರ್ತಿ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ 2 ದಿನಗಳ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ ಕಾರ್ಯಕ್ರಮ ದಲ್ಲಿ ಆರೋಗ್ಯ ಕಾಪಾಡಿಕೊಳ್ಳ ಬೇಕಾದ ಮಾರ್ಗದ ಬಗ್ಗೆ ಮಾಹಿತಿ ನೀಡಿದರು.
ಜೀವನಶೈಲಿ ಬದಲಾದಂತೆ ಆಹಾರ ಕ್ರಮ ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದುಷ್ಪರಿಣಾಮದಿಂದ ದೇಹದ ತೂಕ, ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ ಜೀವಕ್ಕೆ ತೊಂದರೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಉತ್ತಮ ಆಹಾರ ಪದ್ಧತಿ ಅನುಸರಿಸಿಕೊಳ್ಳಲು ಸಲಹೆ ನೀಡಿದರು. ತರಕಾರಿ, ಹಣ್ಣು, ಪ್ರೊಟಿನ್‍ಯುಕ್ತ ಆಹಾರ ಸೇವನೆಯೊಂದಿಗೆ ವ್ಯಾಯಾಮ, ಯೋಗ ಕೂಡ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಾ. ಎ.ವಿ. ಹಿತೇಶ್ ಪಥ್ಯಕ್ರಮ ಮತ್ತು ಉಪವಾಸದಿಂದ ಆಗುವ ಪ್ರಯೋಜನದ ಬಗ್ಗೆ ಸಲಹೆ ನೀಡಿದರು. ಉಪವಾಸದಿಂದ ಸಂಪೂರ್ಣವಾಗಿ ಆಹಾರ ತ್ಯಜಿಸುವುದಕ್ಕಿಂತ ಹೆಚ್ಚಾಗಿ, ಲಘು ಉಪಹಾರಕ್ಕೆ ಬದಲಾಯಿಸಿಕೊಳ್ಳುವ ಪದ್ಧತಿ ಹೆಚ್ಚು ಆರೋಗ್ಯ ವೃದ್ಧಿಸುತ್ತದೆ. ಅಕ್ಕಿಯಿಂದ ತಯಾರಿಸಿದ ಆಹಾರವನ್ನು ದಿನವಿಡೀ ಸೇವಿಸುವುದಕ್ಕಿಂತ ಹಣ್ಣಿನ ರಸ, ಹಣ್ಣು, ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವನೆ ಉತ್ತಮ. ಪಥÀ್ಯಕ್ರಮದಿಂದ ಯಾವ ಸಂದರ್ಭದಲ್ಲಿ ಹಾಗೂ ಕಾಯಿಲೆಗೆ ಅನುಗುಣವಾಗಿ ಆಹಾರ ಸೇವಿಸುವ ಕ್ರಮಕ್ಕೆ ಯೋಜನೆ ರೂಪಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರಾರ್ಥಿಗಳಿಗೆ ಯೋಗ, ಹೈಡ್ರೊಥೆರಫಿ, ಮಸಾಜ್, ಮಡ್ ಮಸಾಜ್ ತಿಳಿಸಿಕೊಡಲಾಯಿತು. ಶಿಬಿರವನ್ನು ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿನಂದಾ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ, ಸ್ವಾಮೀಜಿಗಳಾದ ಪರಹಿತನಂದಾ, ಇಷ್ಟಸೇವನಂದಾ ಸ್ವಾಮೀಜಿ ಇದ್ದರು.