ಸೋಮವಾರಪೇಟೆ,ನ.6: ಸೋಮವಾರಪೇಟೆಯನ್ನು ಸರ್ವ ರೀತಿಯಲ್ಲಿಯೂ ಮಾದರಿ ಪಟ್ಟಣವನ್ನಾಗಿಸಲು ತಮ್ಮ ಅಧಿಕಾರಾವಧಿಯಲ್ಲಿ ಶಕ್ತಿಮೀರಿ ಶ್ರಮಿಸಲಾಗುವದು ಎಂದು ಪ.ಪಂ. ನೂತನ ಅಧ್ಯಕ್ಷರು-ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಳಿನಿ ಗಣೇಶ್ ಮತ್ತು ಬಿ. ಸಂಜೀವ ತಿಳಿಸಿದ್ದಾರೆ.

ಕ್ಷೇತ್ರದ ಶಾಸಕರು, ಸಂಸದರು, ಪ.ಪಂ.ನ ಸದಸ್ಯರುಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸ ಲಾಗುವದು. ರಾಜಕೀಯ ಬದಿಗೊತ್ತಿ ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬಂತೆ ಎಲ್ಲರ ವಿಶ್ವಾಸದೊಂದಿಗೆ ಕಾರ್ಯನಿರ್ವಹಿಸಲಾಗುವದು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ನಳಿನಿ ಗಣೇಶ್ ಮತ್ತು ಸಂಜೀವ ಅವರುಗಳು ಭರವಸೆ ನೀಡಿದ್ದಾರೆ.

ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ, ತೆರಿಗೆ ಸಂಗ್ರಹ, ಪಾರ್ಕ್‍ಗಳ ನಿರ್ವಹಣೆ, ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆ ಯನ್ನು ಸರಿಪಡಿಸುವದು, ಸಿಬ್ಬಂದಿಗಳ ಕೊರತೆ ನೀಗಿಸುವದು, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ಆದ್ಯತೆ ನೀಡಲಾಗುವದು. ಇದರೊಂದಿಗೆ ಎಲ್ಲಾ ವಾರ್ಡ್‍ಗಳಿಗೆ ಆಗಾಗ್ಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಇತ್ಯರ್ಥ ಪಡಿಸುವ ಭರವಸೆಯನ್ನು ನೀಡಿದರು.

ತ್ಯಾಜ್ಯವಿಲೇವಾರಿಗೆ ಸಿದ್ದಲಿಂಗ ಪುರದಲ್ಲಿ ಜಾಗ ಖರೀದಿಸಿದ್ದು, ಸುತ್ತಲೂ ಆವರಣ ಗೋಡೆ, ಗೇಟ್ ಅಳವಡಿಸದೇ ತ್ಯಾಜ್ಯ ಸುರಿಯಲು ಪ್ರಾರಂಭಿಸಿದ್ದರಿಂದ ಸ್ಥಳೀಯರು ಪ್ರತಿರೋಧ ತೋರಿದ್ದಾರೆ. ಈ ಬಗ್ಗೆ ಗಮನ ಹರಿಸಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ವಹಿಸಲಾಗುವದು ಎಂದರು.

ಪಟ್ಟಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುವದು. ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಪಂಚಾಯಿತಿಯ ವಾಹನಕ್ಕೆ ನೀಡಬೇಕು. ಯಾರೂ ಸಹ ಪಟ್ಟಣದಲ್ಲಿ ಕಸವನ್ನು ಎಸೆಯಬಾರದು. ಅಂತಹ ಪ್ರಕರಣ ಕಂಡುಬಂದಲ್ಲಿ ಪಂಚಾಯಿತಿಯಿಂದ ದಂಡ ವಿಧಿಸಲಾಗುವದು ಎಂದು ಹೇಳಿದರು.

ಇದರೊಂದಿಗೆ ಪಟ್ಟಣದಲ್ಲಿ ಟ್ರಾಫಿಕ್ ಹಾಗೂ ವಾಹನ ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಅಳವಡಿಸಲು ಚಿಂತಿಸಲಾಗಿದೆ. ಜೇಸೀ ವೇದಿಕೆಯ ಮುಂಭಾಗ ಸ್ಥಗಿತ ಗೊಂಡಿರುವ ಸಭಾಂಗಣ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವಾಗಿ ಸಾರ್ವಜನಿಕರ ಸೇವೆಗೆ ಒದಗಿಸುತ್ತೇವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಪ.ಪಂ. ಸುತ್ತಮುತ್ತಲ ಗ್ರಾಮಗಳನ್ನು ಒಳಪಡಿಸಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆ ಗೇರಿಸಲು ಕ್ರಮವಹಿಸಲಾಗುವದು. ಶತಮಾನೋತ್ಸವ ಭವನವನ್ನು ಪ.ಪಂ.ಗೆ ಸೇರ್ಪಡೆಗೊಳಿಸುವ ಬಗ್ಗೆಯೂ ಚಿಂತನೆ ಹರಿಸಲಾಗುವದು. ಪ್ರತಿಯೊಂದು ಕಾರ್ಯಕ್ರಮಕ್ಕೂ ಪಂಚಾಯಿತಿಯ ಎಲ್ಲಾ ಸದಸ್ಯರ ಸಲಹೆ-ಸಹಕಾರ ಪಡೆದು ಮುಂದುವರೆಯಲಾಗುವದು ಎಂದು ಅಧ್ಯಕ್ಷರು-ಉಪಾಧ್ಯಕ್ಷರು ಅಭಿಪ್ರಾಯಿಸಿದರು. ಅಧಿಕಾರ ಸ್ವೀಕಾರ ಸಂದರ್ಭ ಪ.ಪಂ. ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ, ಸಿಬ್ಬಂದಿಗಳು ಉಪಸ್ಥಿತರಿದ್ದರು.