ಮಡಿಕೇರಿ, ನ. 6: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಯನ್ನು ರೈತರು ಈಗಾಗಲೇ ಪೂರೈಸಿದ್ದು, ಇದೀಗ ಇದರ ನಿರ್ವಹಣೆಯತ್ತ ಗಮನ ಹರಿಸಿದ್ದಾರೆ. ಭತ್ತದ ಕೃಷಿಗೆ ಸಂಬಂಧಿಸಿದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಗದ್ದೆಗಳಲ್ಲಿ ಭತ್ತ ಕಾಯಿಕಟ್ಟಿರುವುದು ನಿಧಾನಗತಿಯಲ್ಲಿ ಕುಯಿಲಿನ ಹಂತದತ್ತ ಸಾಗುತ್ತಿದೆ. ಕೆಲವೆಡೆಗಳಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆ ಇದರ ಬಗ್ಗೆ ಸೂಕ್ತ ಮಾರ್ಗದರ್ಶನ, ಸಲಹೆಯನ್ನು ರೈತರಿಗೆ ನೀಡುತ್ತಿದೆ. ನವೆಂಬರ್ ಅಂತ್ಯದಿಂದ ಸಾಧಾರಣವಾಗಿ ಭತ್ತದ ಫಸಲು ಕುಯಿಲಿಗೆ ಬರಲಿದ್ದು, ಇದು ಡಿಸೆಂಬರ್ ಅಂತ್ಯದತನಕವೂ ಮುಂದುವರಿಯಲಿದೆ. ಈತನಕ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇದೀಗ ಹಳದಿ ವರ್ಣದತ್ತ ಸಾಗುತ್ತಿದೆ. ತೆನೆ ಒಡೆಯುವುದು, ಕಾಯಿ ಕಟ್ಟುವ ಪ್ರಮುಖ ಸಮಯ ಇದಾಗಿದ್ದು, ಪ್ರಸ್ತುತ ಮಗದೊಮ್ಮೆ ವಾತಾವರಣದಲ್ಲಿ ಕಂಡುಬರುತ್ತಿರುವ ಅಸಹಜತೆ ರೈತರಲ್ಲಿ ಆತಂಕ ಸೃಷ್ಟಿಸುತ್ತಿದೆ. ವಿವಿಧ ಬಗೆಯ ತಳಿಗಳು ಹಂತಹಂತವಾಗಿ ಕುಯಿಲಿಗೆ ಬರಲಿವೆ.

ಶೇ.78ರಷ್ಟು ಕೃಷಿಪ್ರಸಕ್ತ ವರ್ಷ ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ಕಾರಣಾಂತರಗಳಿಂದಾಗಿ ಈ ಬಾರಿ ಸುಮಾರು 23,737 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಶೇ.78ರಷ್ಟು ಮಾತ್ರ ಗುರಿ ಸಾಧನೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು ಅವರು ತಿಳಿಸಿದರು. ರೈತರು ಭತ್ತದ ಬದಲಿಗೆ

(ಮೊದಲ ಪುಟದಿಂದ) ತೋಟಗಾರಿಕೆ ಬೆಳೆಯತ್ತ ಆಸಕ್ತಿ ತೋರುತ್ತಿರುವುದು, ಕಾರ್ಮಿಕರ ಸಮಸ್ಯೆ, ಭೂಕುಸಿತದಂತಹ ಘಟನೆಗಳಿಂದ ಹೂಳು ಆವರಿಸಿರುವುದು ಮತ್ತಿತರ ಕಾರಣಗಳಿಂದ ಶೇಕಡವಾರು ಪ್ರಮಾಣ ಕಡಿಮೆಯಾಗಿರುವುದಾಗಿ ರಾಜು ಅವರು ಅಭಿಪ್ರಾಯಪಟ್ಟರು.

ಇದಲ್ಲದೆ, ಕಳೆದ 3 ವರ್ಷಗಳಿಂದ ಸತತವಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಠಿ, ಪ್ರಾಕೃತಿಕ ದುರಂತವೂ ಭತ್ತದ ಕೃಷಿಯ ಹಿನ್ನಡೆಗೆ ಒಂದು ಕಾರಣವಾಗಿದೆ. ಇದರಿಂದಾಗಿ ವರ್ಷಂಪ್ರತಿ ಭತ್ತ ಬೆಳೆಯುವ ಪ್ರಮಾಣ ಕುಂಠಿತಗೊಳ್ಳುತ್ತಿದೆ. ಈ ಮೂರು ವರ್ಷಗಳಲ್ಲಿ ಸುಮಾರು 3ರಿಂದ 4 ಸಾವಿರ ಹೆಕ್ಟೇರ್‍ನಷ್ಟು ಪ್ರದೇಶದಷ್ಟು ಭತ್ತದ ಕೃಷಿ ಇಳಿಮುಖವಾಗಿದೆ ಎನ್ನಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಭವಿಷ್ಯದಲ್ಲೂ ಮುಂದುವರಿದಲ್ಲಿ ರೈತರು ಭತ್ತದ ಕೃಷಿಯತ್ತ ಇನ್ನಷ್ಟು ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸರಕಾರವೂ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಭತ್ತ ಬೆಳೆಯಲು ಉತ್ತೇಜನಕಾರಿಯಾದಂತಹ ಕೆಲವು ಯೋಜನೆಗಳನ್ನು ಜಾರಿಗೆ ತರಬೇಕಿದೆ ಎಂದು ಕೃಷಿಕರು ಹೇಳುತ್ತಾರೆ.