ಸೋಮವಾರಪೇಟೆ, ನ. 6: ತಾಲೂಕಿನ ಆಲೂರು ಗ್ರಾಮದಿಂದ ಮರಿಯಾನಗರಕ್ಕೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಣಾವಾರ ಆಲೂರು ರಸ್ತೆಯಲ್ಲಿ ಸಂಜೆ ನಡೆದಿದೆ.ಘಟನೆಯಿಂದ ಅರಕಲಗೂಡು ತಾಲೂಕಿನ ಮರಿಯಾನಗರ, ದೊಡ್ಡಬೊಮ್ಮನಹಳ್ಳಿ ಗ್ರಾಮದ ಮಂಜುಳ ರಾಜೇಗೌಡ, ಸಹನ ಅವರುಗಳು ತೀವ್ರ ಗಾಯಗೊಂಡಿದ್ದರೆ, ಇತರ ಕಾರ್ಮಿಕರಾದ ದರ್ಶನ್, ವಿಜಯ್, ಫಿಲೋಮಿನಾ, ರಾಜು, ನವೀನ್‍ಕುಮಾರ್, ಪ್ರೇಮಕುಮಾರಿ, ಸ್ವಾಮಿ, ದರ್ಶನ್, ಗೀತ ಅವರುಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆಲೂರು ಗ್ರಾಮಕ್ಕೆ ಶುಂಠಿ ಕೀಳಲೆಂದು ಬೆಳಿಗ್ಗೆ ಆಗಮಿಸಿ, ಸಂಜೆ ವಾಪಸ್

(ಮೊದಲ ಪುಟದಿಂದ) ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಆಟೋ ಚಾಲಕ ತೆರಗಳಲೆ ಗ್ರಾಮದ ಅನಿಲ್ ಎಂಬಾತನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಠಾಣಾಧಿಕಾರಿ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆಟೋ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.