ಮಡಿಕೇರಿ, ನ. 6: ರಸ್ತೆ ಬದಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದಲ್ಲದೆ ನಂತರ ರೂ.1000 ದಂಡ ವಿಧಿಸಿದ ಘಟನೆ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕಡಗದಾಳು ಸಮೀಪದ ನಿವಾಸಿ ವಿನಯ್ ಎಂಬಾತ ಕಸವನ್ನು ಕಡಗದಾಳು ರಸ್ತೆ ಬದಿಯಲ್ಲಿ ಎಸೆದಿದ್ದು, ಇದನ್ನು ಗಮನಿಸಿದ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗ್ರೀನ್ ಸಿಟಿ ಫೋರಮ್‍ನ ಕಾರ್ಯದರ್ಶಿ ಮಾದೇಟಿರ ತಿಮ್ಮಯ್ಯ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ಕಸ ಎಸೆದ ಸ್ಥಳಕ್ಕೆ ವಿನಯ್ ವಾಪಸ್ ಬಂದಿದ್ದು, ತಿಮ್ಮಯ್ಯ ಸೇರಿದಂತೆ ಸ್ಥಳಕ್ಕೆ ಆಗಮಿಸಿದ ಗ್ರೀನ್ ಸಿಟಿ ಫೋರಮ್‍ನ ಚೆಯ್ಯಂಡ ಸತ್ಯ ವಿನಯ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಾನು ಕಸವನ್ನು ಇಟ್ಟಿದಷ್ಟೆ, ನಾಯಿ ಅದನ್ನು ಎಳೆದು ಹಾಕಿದೆ’ ಎಂದು ಹೇಳಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ನಂತರ ಮಾತಿನ ಚಕಮಕಿ ಸ್ವಲ್ಪ ತೀವ್ರಗೊಂಡಿದ್ದು, ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ಬಳಿಕ ತಮ್ಮ ತಪ್ಪನ್ನು ಕಸ ಎಸೆದ ವಿನಯ್ ಒಪ್ಪಿಕೊಂಡಿದ್ದಾರೆ. ಕಡಗದಾಳು ಪಂಚಾಯಿತಿ ವತಿಯಿಂದ ರೂ.1000 ದಂಡವನ್ನು ವಿನಯ್ ಅವರ ಮೇಲೆ ವಿಧಿಸಲಾಯಿತು. ಕೆಲವೇ ದಿನಗಳ ಅವಧಿಯಲ್ಲಿ 3 ನೇ ಬಾರಿ ಕಸ ಎಸೆದವರಿಂದ ಕಸ ಹೆಕ್ಕಿಸಿದ್ದು, ತಿಮ್ಮಯ್ಯ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.