ಗೋಣಿಕೊಪ್ಪ ವರದಿ, ನ. 6: ಕಾನೂರು ಸಮೀಪದ ನಿಡುಗುಂಬ-ಗಂಗೆತೋಡು ರಸ್ತೆ ಅಭಿವೃದ್ಧಿಗೆ ಮುಂದಾಗದ ಸರ್ಕಾರದ ಕ್ರಮವನ್ನು ಖಂಡಿಸಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಿಡುಗುಂಬ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

2 ದಶಕಗಳ ಹಿಂದೆ ಈ ರಸ್ತೆಗೆ ಸೋಲಿಂಗ್ ಹಾಕಲಾಗಿತ್ತು. ನಂತರ ಇಲ್ಲಿವರೆಗೂ ಅಭಿವೃದ್ಧಿ ಕಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ಸಂಸದರವರೆಗೂ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಗ್ರಾಮಸ್ಥರು ಸಭೆ ಸೇರಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಗ್ರಾಮದ ಪ್ರಮುಖ ಸುಳ್ಳಿಮಾಡ ಚಿಣ್ಣಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಈ ರಸ್ತೆಯನ್ನು ಸುಮಾರು 150 ಜನರು ಅವಲಂಬಿಸುತ್ತಾರೆ. ಕಾನೂರು-ಕೊಟ್ಟಗೇರಿಗೆ ಸಂಪರ್ಕ ಬೆಸೆಯುವುದರಿಂದ ಸುಮಾರು 8 ಕಿ.ಮೀ ದೂರ ಕಡಿಮೆಯಾಗುತ್ತದೆ. ಇದರಿಂದ ನಿತ್ಯ ನೂರಾರು ಪ್ರಯಾಣಿಕರಿಗೆ ಈ ರಸ್ತೆ ಅವಶ್ಯವಾಗಿದ್ದು, ಮಣ್ಣಿನ ರಸ್ತೆಯಲ್ಲಿ ತೀರಾ ಗುಂಡಿಬಿದ್ದಿರುವುದು ನಡೆದಾಡಲು ಕೂಡ ಆಗುವುದಿಲ್ಲ. ಈ ಬಗ್ಗೆ 20 ವರ್ಷಗಳಿಂದ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.

ಸಾಕಷ್ಟು ರೈತರು ಇದೇ ರಸ್ತೆಯಲ್ಲಿ ಬೆಳೆಯನ್ನು ಸಾಗಣೆ ಮಾಡಬೇಕಿದೆ. ಜೀಪ್ ಮಾತ್ರ ಇತ್ತ ಬರಲು ಆಗುತ್ತದೆ. ಬಾಡಿಗೆ ವಾಹನ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ತೀರಾ ಹಿಂದುಳಿದಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ನಡೆದಾಡಲು ಕೂಡ ಯೋಗ್ಯವಾಗಿಲ್ಲ. 2 ಕಿ.ಮೀ ಉದ್ದವಿರುವ ಈ ರಸ್ತೆಗೆ ಕಾಂಕ್ರಿಟ್ ಮೂಲಕ ಅಭಿವೃದ್ಧಿ ಪಡಿಸಿ ಸ್ಥಳಿಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸ್ಥಳೀಯರಿಗೆ ಕುಡಿಯುವ ನೀರಿನ ಸೌಕರ್ಯ ಸರ್ಕಾರ ಕಲ್ಪಿಸಿಲ್ಲ. ಕೊಳವೆ ಬಾವಿ ಇಲ್ಲ. ನೀರಿನ ಟ್ಯಾಂಕ್ ನಿರ್ಮಿಸಿಲ್ಲ. ವನ್ಯಪ್ರಾಣಿಗಳ ಉಪಟಳದಿಂದ ಇರುವ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೊಬೈಲ್ ಟವರ್ ಕೂಡ ಅವೈಜ್ಞಾನಿಕವಾಗಿದೆ. ವಿದ್ಯುತ್ ನಿತ್ಯ 20 ಬಾರಿ ಕಣ್ಣಾಮುಚ್ಚಾಲೆಯಾಡುತ್ತದೆ. ಸರ್ಕಾರದ ಎಲ್ಲಾ ಮೂಲ ಸೌಕರ್ಯವನ್ನು ಗ್ರಾಮ ಕಳೆದುಕೊಂಡಿದೆ. ಇದರಿಂದ ಬೇಸತ್ತು ಇಂತಹ ನಿರ್ಣಯಕ್ಕೆ ಬರಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಅಮ್ಮಣಿಚಂಡ ನಂಜಪ್ಪ ಮಾತನಾಡಿ, ನಿಡುಗುಂಬ-ಹಾವುಕಲ್ಲು ರಸ್ತೆಗೆ 12 ವರ್ಷಗಳ ಹಿಂದೆ ಕಲ್ಲು ಹಾಕಲಾಗಿತ್ತು. ನಂತರ ತೀರ ಹದಗೆಟ್ಟಿದೆ. ಸಾಕಷ್ಟು ಜನರಿಗೆ ನಿತ್ಯ ಓಡಾಡುವ ರಸ್ತೆಯಾಗಿರುವುದರಿಂದ ಡಾಂಬರಿಕರಣಗೊಳಿಸಿ ಕೊಡಬೇಕಾಗಿದೆ. ಈ ರಸ್ತೆಯ ಮಚ್ಚಮಾಡ ಲವ, ಚೊಟ್ಟೆಕ್‍ಮಾಡ ಅಯ್ಯಣ್ಣ ಅವರ ಹದ್ದಿನಿಂದ ಅಮ್ಮಣಿಚಂಡ ನಂಜಪ್ಪ ಹದ್ದಿನವರೆಗೆ ಗುಂಡಿ ಬಿದ್ದು ಸಂಪೂರ್ಣವಾಗಿ ನಡೆದಾಡಲು ಕೂಡ ಆಗುತ್ತಿಲ್ಲ. ಇದರ ಅಭಿವೃದ್ಧಿ ಪಡಿಸಿ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ವಿ.ಆರ್. ಗಣೇಶ್, ಮಚ್ಚಮಾಡ ಟಿ. ಲವ, ಅಮ್ಮಣಿಚಂಡ ನಂಜಪ್ಪ, ಹೆಚ್.ಎಂ. ಕುಮಾರ್ ಇದ್ದರು.