*ಸಿದ್ದಾಪುರ, ನ. 5: ರೈತರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಕಾಫಿ ಗುಣಮಟ್ಟ ಪರೀಕ್ಷಿಸುವ ನೂತನ ಯಂತ್ರವನ್ನು ಖರೀದಿಸಲಾಗಿದ್ದು, ಇದು ಬೆಳೆಗಾರರಿಗೆ ಹೆಚ್ಚು ಸಹಕಾರಿಯಾಗಲಿದೆ. ಕಾಫಿಯಲ್ಲಿನ ಔಟ್‍ಟರ್ನ್ ಮತ್ತು ತೇವಾಂಶ ಪರೀಕ್ಷೆಗೆಂದೇ ಯಂತ್ರವನ್ನು ಖರೀದಿಸಿ ಬೆಳೆಗಾರರು ಇತರ ವ್ಯಾಪಾರಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಈ ಸೌಲಭ್ಯವನ್ನು ಕಲ್ಪಿಸಲು ಸಂಘ ಮುಂದಾಗಿದೆ.

ವ್ಯಾಪಾರಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಕಾಫಿ ಮಾರಾಟ ಮಾಡಿದಾಗ ಒಂದು ವಾರ, ಹತ್ತು ದಿನ ಕಳೆದು ಕಾಫಿಯ ಗುಣಮಟ್ಟದ ನೆಪವೊಡ್ಡಿ ಬೆಳೆಗಾರರಿಗೆ ಅಲ್ಪಮೊತ್ತದ ಹಣ ನೀಡುತ್ತಿದ್ದ ಮತ್ತು ಹಣ ನೀಡಲು ವಿಳಂಬ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದನ್ನು ಮನಗಂಡ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ಪರೀಕ್ಷಾ ಯಂತ್ರವನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.

ಬೆಳೆಗಾರರಿಂದ ಸಣ್ಣ ಶುಲ್ಕವನ್ನು ಪಡೆದು ಕಾಫಿ ಗುಣಮಟ್ಟ ಪರೀಕ್ಷೆ ಮಾಡಿ ದೃಢೀಕರಣ ಪತ್ರ ನೀಡುವ ನೂತನ ಪ್ರಯೋಗಕ್ಕೆ ಅವರು ಮುಂದಾಗಿದ್ದಾರೆ. ಸದ್ಯದಲ್ಲಿಯೇ ಯಂತ್ರ ಬೆಳೆಗಾರರ ಸೇವೆಗಾಗಿ ಉದ್ಘಾಟನೆಗೊಳ್ಳಲಿದೆ.

ಇದರೊಂದಿಗೆ ಸಹಕಾರ ಸಂಘದ ಆವರಣದಲ್ಲಿ ಶುದ್ಧ ನೀರಿನ ಘಟಕವನ್ನು ಕೂಡ ಸ್ಥಾಪಿಸಲಾಗುತ್ತಿದ್ದು, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಸುತ್ತಮುತ್ತಲ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಣಿ ಉತ್ತಪ್ಪ ತಿಳಿಸಿದ್ದಾರೆ.

ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕ್ರಿಮಿನಾಶಕ ಸೇರಿದಂತೆ ಕೃಷಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಚೆಟ್ಟಳ್ಳಿ ಜನತೆಗೆ ದೂರದ ಊರುಗಳಿಗೆ ತೆರಳುವ ಕಷ್ಟ ತಪ್ಪಿದಂತಾಗಿದೆ.

ಸಂಘದ ಮೂಲಕ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದೊಂದು ವಿನೂತನ ಪ್ರಯೋಗವಾಗಿದೆ. ಈ ಕ್ರಮದಿಂದ ಯುವ ಸಮೂಹ ಸ್ವಂತ ವಾಹನ ಹೊಂದಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ ಎಂದು ಮಣಿ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಸಣ್ಣ ಗ್ರಾಮವೊಂದರಲ್ಲಿ ಸಹಕಾರಿ ಕ್ಷೇತ್ರದ ಮೂಲಕವೇ ಸಾರ್ವಜನಿಕರಿಗೆ ಸಹಕಾರಿಯಾಗುವ ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸುತ್ತಿರುವ ಸಂಘದ ಆಡಳಿತ ಮಂಡಳಿ ಜಿಲ್ಲೆಯ ಸಹಕಾರಿಗಳ ಹಾಗೂ ಬೆಳೆಗಾರರ ಗಮನ ಸೆಳೆದಿದೆ. - ಅಂಚೆಮನೆ ಸುಧಿ