ಚೆಟ್ಟಳ್ಳಿ, ನ. 4: ಕೊಡಗು ವೀರರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಾಡೆಂದು ಹೇಳಿಕೊಳ್ಳುತ್ತೇವೆ. ಈ ವೀರಯೋಧರನ್ನು ನೆನಪಿಸಿಕೊಳ್ಳಲು ಹಾಗೂ ಯುವಪೀಳಿಗೆಗೆ ಪ್ರೇರಣೆಯಾಗಲೆಂದು ಮಡಿಕೇರಿಯ ಹಲವು ವೃತ್ತಗಳಿಗೆ, ಮೈದಾನಕ್ಕೆ ವೀರಯೋಧರ ಹೆಸರನ್ನು ಸರಕಾರದ ಮುಖಾಂತರ ಇರಿಸಲಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ಹಲವು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ, ಕಡತಗಳಲ್ಲಿ ಇವರಿಗೆ ಗೌರವ ತೋರದೆ ಮರೆತಂತಿದೆ ಎಂದು ಕೊಡವ ಮಕ್ಕಡ ಕೂಟ ಆರೋಪಿಸಿದೆ. ಫೀಲ್ಡ್ ಮಾರ್ಷಲ್ ಕೆ.ಯಂ. ಕಾರ್ಯಪ್ಪ ವೃತ್ತಕ್ಕೆ ಸುದರ್ಶನ ವೃತ್ತವೆಂದು ನಮೂದಿಸುತಿದ್ದಾರೆ. ಇನ್ನು ಮುಂದೆಯಾದರೂ ಸರಕಾರದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಯಂ. ಕಾರ್ಯಪ್ಪ ವೃತ್ತವೆಂದೂ, ಜನರಲ್ ತಿಮ್ಮಯ್ಯ ವೃತ್ತವೆಂದೂ, ಮಂಗೇರಿರ ತಿಮ್ಮಯ್ಯ ವೃತ್ತವೆಂದೂ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತವೆಂದೂ, ಕೊಡಗಿನ ಗಾಂಧಿ ಎಂದು ಹೆಸರು ಗಳಿಸಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಾಬೆಳ್ಯಪ್ಪ ರಸ್ತೆ ಎಂದೂ, ಕನ್ನಂಡ ದೊಡ್ಡಯ್ಯ ವೃತ್ತ, ಹರದಾಸ ಅಪ್ಪಚ್ಚಕವಿ ರಸ್ತೆ, ಕೊಂಗಾಡ ಗಣಪತಿ ಬೀದಿ ಹಾಗೂ ಜನರಲ್ ತಿಮ್ಮಯ್ಯ ಮೈದಾನವನ್ನು ಜನರಲ್ ತಿಮ್ಮಯ್ಯ ಮೈದಾನವೆಂದೇ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ಕಡ್ಡಾಯವಾಗಿ ನಮೂದಿಸಬೇಕೆಂದು ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಕೂಟದ ಪರವಾಗಿ ಒತ್ತಾಯಿಸಿದ್ದಾರೆ.