ಮಡಿಕೇರಿ, ನ. 4: ಜಿಲ್ಲೆಯ ಪವಿತ್ರ ಶ್ರೀ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿ ಇದೀಗ ಸುಮಾರು 15 ದಿನಗಳು ಕಳೆದಿವೆ. ಕ್ಷೇತ್ರಕ್ಕೆ ಈ ಹಿಂದಿನ ವರ್ಷಕ್ಕಿಂತ ಕಡಿಮೆಯಾದರೂ ಪ್ರವಾಸಿಗರನ್ನು ಹೊರತುಪಡಿಸಿ ದಿನಂಪ್ರತಿ ಸುಮಾರು 1500ರಷ್ಟು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ವರ್ಷ ಕೊರೊನಾ ನಿರ್ಬಂಧದಿಂದಾಗಿ ಭಕ್ತರ ಸಂಖ್ಯೆ ವಿರಳವಾಗಿದೆ.

ತೀರ್ಥೋದ್ಭವದ ಬಳಿಕ ಒಂದು ತಿಂಗಳ ಕಾಲ ಕಿರು ಸಂಕ್ರಮಣದ ತನಕವೂ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವುದು ವಾಡಿಕೆ. ಆದರೆ ಈ ಬಾರಿ ಪೂಜಾ ವಿಧಿ - ವಿಧಾನಗ ಳೊಂದಿಗೆ ಸಂಪ್ರದಾಯಬದ್ಧವಾಗಿ ಸ್ಥಳೀಯ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಪೂಜಾ ಕೈಂಕರ್ಯಗಳಿಗೆಂದೇ ಆಗಮಿಸುತ್ತಿರುವ ಸ್ಥಳೀಯ ಭಕ್ತರ ಸಂಖ್ಯೆ ದಿನಂಪ್ರತಿ ಸರಾಸರಿ ಸಾವಿರದೈನೂರರಷ್ಟಿರುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್. ತಮ್ಮಯ್ಯ ಅವರು ತಿಳಿಸಿದ್ದಾರೆ.

ಪ್ರತಿದಿನ ಸುಮಾರು ಸರಾಸರಿ 300ರಷ್ಟು ಪಿಂಡಪ್ರದಾನ ಕಾರ್ಯ ಜರುಗುತ್ತಿದೆ. ಇದರೊಂದಿಗೆ ಭಾಗಮಂಡಲದಲ್ಲಿ ಎಲ್ಲಾ ದಿನಗಳಲ್ಲೂ 50ರಿಂದ 60 ಕೆಜಿಯಷ್ಟು ಅಕ್ಕಿಯ ಅನ್ನದಾನ ಜರುಗುತ್ತಿರುವುದಾಗಿ ಅವರು ತಿಳಿಸಿದರು. ಸಾಧಾರಣವಾಗಿ ಬೆಳಿಗ್ಗೆ 6.30ರಿಂದ ಅಪರಾಹ್ನ 3.30ರ ತನಕವೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು.

ಕೋವಿಡ್ ನಿಯಮಾನು ಸಾರವಾಗಿ ಎಲ್ಲಾ ಕಾರ್ಯಗಳು ಜರುಗುತ್ತಿವೆ. ಕಿರುಸಂಕ್ರಮಣದ ತನಕವೂ ವಿಧಿ-ವಿಧಾನಗಳು ಮುಂದುವರಿಯಲಿದೆ.