ಗೋಣಿಕೊಪ್ಪಲು, ನ. 4: ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಆಗಿಂದ್ದಾಗ್ಗೆ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕೇವಲ 4 ತಿಂಗಳುಗಳಲ್ಲಿ ಸುಮಾರು 12 ಜಾನುವಾರುಗಳನ್ನು ಹುಲಿ ಕೊಂದುಹಾಕಿದೆ. ನಿರಂತರ ತೊಂದರೆ ಕೊಡುತ್ತಿರುವ ಈ ಹುಲಿಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ತಾ.3 ರಂದು ಈ ಬಗ್ಗೆ 'ಶಕ್ತಿ' ವರದಿ ಪ್ರಕಟಿಸಿತ್ತು. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ತಿತಿಮತಿ ಭದ್ರಗೊಳ ಗ್ರಾಮದ ಕಾಣತಂಡ ಮುತ್ತಪ್ಪ ಅವರ ತೋಟದಲ್ಲಿ ಹುಲಿಯ ಸೆರೆಗೆ ಬೋನನ್ನು ಅಳವಡಿಸಿದ್ದಾರೆ.
ಇತ್ತೀಚೆಗೆ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತ ಸಂಘದಿಂದ ಆಯೋಜನೆಗೊಂಡಿದ್ದ ರೈತ ಸಂವಾದ ಕಾರ್ಯಕ್ರಮದಲ್ಲಿಯು ತಿತಿಮತಿ ಭಾಗದಲ್ಲಿ ಬೀಡುಬಿಟ್ಟಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಈ ಭಾಗದ ರೈತರು ಒತ್ತಾಯ ಮಾಡಿದ್ದರು. Àಕೂಡಲೇ ಹುಲಿ ಸೆರೆಗೆ ಬೋನನ್ನು ಅಳವಡಿಸುವಂತೆ ರೈತ ಸಂಘದ ಅಧ್ಯಕ್ಷ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು.
ಇದೀಗÀ ಆನೆಚೌಕೂರು ವನ್ಯಜೀವಿ ವಲಯದ ಆರ್‍ಎಫ್‍ಒ ಕಿರಣ್ ಕುಮಾರ್ ತಮ್ಮ ಸಿಬ್ಬಂದಿಗಳ ಮೂಲಕ ಹುಲಿ ಸೆರೆಗೆ ಬೋನನ್ನು ಅಳವಡಿಸಿ ಹುಲಿ ಸಂಚಾರದ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಈ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿದು ಕೂಡಲೇ ಹುಲಿಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ನಿರಂತರ ವನ್ಯ ಜೀವಿಗಳ ಹಾವಳಿ ಇರುವುದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಅರಣ್ಯದ ಅಂಚಿನಲ್ಲಿ ವನ್ಯ ಜೀವಿಗಳು ನಾಡಿಗೆ ಬರದಂತೆ ಅಳವಡಿಸಿರುವ ಸೋಲಾರ್ ಬೇಲಿಗಳು ಹಾಳಾಗಿದ್ದು ಇದನ್ನು ದುರಸ್ತಿ ಮಾಡದೆ ಇರುವುದರಿಂದ ವನ್ಯ ಜೀವಿಗಳು ಅರಣ್ಯದಿಂದ ನೇರವಾಗಿ ಕಾಫಿ ತೋಟಗಳತ್ತ ಆಗಮಿಸುತ್ತಿವೆ ಎಂದು ಹಸು ಕಳೆದುಕೊಂಡ ಮಾಲೀಕರಾದ ಕಾಣತಂಡ ಮುತ್ತಪ್ಪ ತಮ್ಮ ನೋವನ್ನು ತೋಡಿಕೊಂಡರು. ನಮಗೆ ಸರ್ಕಾರದ ಪರಿಹಾರ ಬೇಕಾಗಿಲ್ಲ. ಬದಲಿಗೆ ಹುಲಿಯು ಆಗಮಿಸದಂತೆ ಕ್ರಮ ಕೈಗೊಂಡರಷ್ಟೆ ಸಾಕೆಂದು ಭಿನ್ನವಿಸಿದರು. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು, ಅರಣ್ಯ ಇಲಾಖೆಯ ಶಿವಪ್ಪ ಮತ್ತಿತರರು ಹಾಜರಿದ್ದರು.