ಮಡಿಕೇರಿ, ನ. 4: ಕರ್ನಾಟಕ - ಕೇರಳ ಗಡಿಯಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ಬರುವ ಕೊಡಗು ಜಿಲ್ಲೆಯಲ್ಲಿಯೂ ಹೆಚ್ಚು ನಿಗಾವಹಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು ನಕ್ಸಲ್ ನಿಗ್ರಹ ಪಡೆಯಿಂದ ಗಡಿಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ.

ನಕ್ಸಲರು ಕರ್ನಾಟಕಕ್ಕೆ ಕೊಡಗಿನ ಮೂಲಕ ನುಸುಳದಂತೆ ತಡೆಯಲು ಇಲಾಖೆ ಎಲ್ಲಾ ಕ್ರಮ ವಹಿಸಿದೆ. ಈ ನಿಟ್ಟಿನಲ್ಲಿ ನಕ್ಸಲ್ ನಿಗ್ರಹ ದಳವನ್ನು ಚುರುಕುಗೊಳಿಸಲಾಗಿದೆ. ಈ ತಂಡ ಅರಣ್ಯ ಪ್ರದೇಶ ಗಡಿ ಭಾಗಗಳಲ್ಲಿ ಕೂಂಬಿಂಗ್ ಮುಂದುವರಿಸಲಿದೆ. ಈ ಕಾರ್ಯಾಚರಣೆಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಾಗದು ಎಂದು ಕ್ಷಮಾ ಮಿಶ್ರಾ ಅವರು ವಿವರಿಸಿದ್ದಾರೆ.

ನಿನ್ನೆ ದಿನ ನಸುಕಿನಲ್ಲಿ ಕೇರಳದ ವಯನಾಡ್ ಅರಣ್ಯ ವಲಯದಲ್ಲಿ ಶಂಕಿತ ನಕ್ಸಲ್‍ನೋರ್ವನೆನ್ನಲಾಗಿ ರುವ ವೇಲುಮುರುಗನ್ ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಕೊಡಗಿನಲ್ಲೂ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಮಂಗಲ - ಕುಟ್ಟ ವಿಭಾಗದಲ್ಲಿ ಈಗಾಗಲೇ ನಕ್ಸಲ್ ನಿಗ್ರಹ ಪಡೆ. ಈ ಹಿಂದಿನಿಂದಲೂ ಕಾರ್ಯೋನ್ಮುಖವಾಗಿದ್ದು, ಇದೀಗ ಈ ವಿಭಾಗದಲ್ಲಿ ಇನ್ನಷ್ಟು ನಿಗಾವಹಿಸಲಾಗಿದೆ ಎಂದೂ ಹೇಳಲಾಗಿದೆ.