ಕುಶಾಲನಗರ, ನ. 4: ಲವ್ ಜಿಹಾದ್ ಮತ್ತು ಹರಿಯಾಣದಲ್ಲಿ ನಡೆದ ನಿಖಿತಾ ಥೋಮರ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಗಳಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಮತಾಂತರಿಗಳು, ಅತ್ಯಾಚಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಹರಿಯಾಣದಲ್ಲಿ ನಡೆದ ನಿಖಿತಾ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಭಯೋತ್ಪಾದಕ ಶಕ್ತಿಗಳು, ಅತ್ಯಾಚಾರಿಗಳು ಹಾಗೂ ಮತಾಂತರಿಗಳನ್ನು ಹತ್ತಿಕ್ಕುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ದುರ್ಗಾವಾಹಿನಿ ವೇದಿಕೆ ಪ್ರಮುಖರಾದ ಅಂಬಿಕಾ ಉತ್ತಪ್ಪ, ಲವ್ ಜಿಹಾದ್ ವಿರುದ್ಧ ಸರಕಾರ ಕಠಿಣ ಕಾನೂನು ರೂಪಿಸಬೇಕಿದೆ ಎಂದು ಆಗ್ರಹಿಸಿದರು. ಜಿ.ಪಂ. ಸದಸ್ಯೆ ಮಂಜುಳಾ ಮಾತನಾಡಿ, ಪ್ರತಿಯೊಬ್ಬ ಹಿಂದೂ ಹೆಣ್ಣುಮಕ್ಕಳು ಜಾಗೃತರಾಗಬೇಕಿದೆ. ಮತಾಂಧ ಶಕ್ತಿಗಳ ಆಕರ್ಷಣೆಗೆ ಬಲಿಯಾಗಬಾರದು. ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು. ವಿಎಚ್‍ಪಿಯ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾತನಾಡಿದರು. ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸುವಂತೆ ಆಗ್ರಹಿಸಿ ಉಪ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್, ಸದಸ್ಯರಾದ ಅಮೃತ್‍ರಾಜ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯ ವೈಶಾಖ್, ಪುಂಡರೀಕಾಕ್ಷ ಮತ್ತು ಸಂಘಟನೆಗಳ ಪ್ರಮುಖರಾದ ಸುರೇಶ್ ಮುತ್ತಪ್ಪ, ಸಂತೋಷ್, ರಾಜೀವ, ವಿಖಿತಾ, ನವನೀತ್, ನಾಗೇಶ್, ಡಾಟಿ, ರುದ್ರಾಂಬಿಕೆ ಹಾಗೂ ಸಂಘಟನೆಗಳ ಕಾರ್ಯಕರ್ತರು ಇದ್ದರು.