ಕಣಿವೆ, ನ. 3: ಆಧುನಿಕ ಜಗತ್ತಿನ ಇಂದಿನ ಕಾಲಘಟ್ಟದಲ್ಲಿ ಬಹಳಷ್ಟು ಯುವಕರಿಗೆ ಕೃಷಿ ಎಂದರೆ ಏನೋ ಒಂಥರ ಅಲರ್ಜಿ, ಏನೋ ಒಂದು ರೀತಿಯ ಆಲಸ್ಯ, ಯಾಕೋ ಏನೋ ಸೋಮಾರಿತನ. ಅಪ್ಪ ಹಾಕಿದ ಆಲದ ಮರದ ಬುಡಕ್ಕೆ ಜೋತು ಬೀಳುತ್ತಾ ಹಳ್ಳಿಯಲ್ಲೇ ಕೊಳೆಯಬೇಕೇನು ಎಂದುಕೊಂಡು ಹಳ್ಳಿಯ ಪರಿಸರದಿಂದ ಬೇಸತ್ತು ನಗರಗಳ ಬಣ್ಣದ ಜೀವನಕ್ಕೆ ಮಾರು ಹೋಗಿ ಅಲ್ಲೂ ಕೂಡ ಏನೂ ಮಾಡಲಾಗದೇ ಕೈಚೆಲ್ಲಿ ಬದುಕನ್ನು ಬರಿದಾಗಿಸಿಕೊಂಡು ಜೀವನವೇ ಮುಗಿಯಿತು ಎಂದುಕೊಂಡು ಖಿನ್ನತೆ ಗೊಳಗಾದ ಯುವಕರನ್ನು ನಾವು ಕಾಣುತ್ತಿದ್ದೇವೆ.
ಇನ್ನೂ ಕೆಲವರು, ಅಪ್ಪ ಹಾಕಿದ ಆಲದ ಮರವೆಂಬ ಪುರಾತನ ಕಾಲದ ಕೃಷಿ ಪದ್ಧತಿಯಿಂದ ಆಧುನಿಕ ಕೃಷಿ ಪದ್ಧತಿಗೆ ಹೊರಳದೇ ಹಾಗೆಯೇ ವ್ಯರ್ಥ ಜೀವನ ಕಳೆಯುತ್ತಿರುವವನ್ನು ನಾವು ಕಾಣುತ್ತಿದ್ದೇವೆ.
ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದ ಮಾತ್ರಕ್ಕೆ ಸರ್ಕಾರದ ಉದ್ಯೋಗವೇಬೇಕೆಂದು ಆಕಡೆ ಮುಖ ಮಾಡಿ ಕೂರುತ್ತಾ, ಭೂಮಿಯಲ್ಲೂ ದುಡಿಯದೇ, ಕೆಲಸವನ್ನು ಗಿಟ್ಟಿಸಿಕೊಳ್ಳದೇ ಪರಿತಪಿಸುತ್ತಿರುವ ಅದೆಷ್ಟೋ ನಿರುದ್ಯೋಗಿಗಳು ನಮ್ಮೊಳಗಿದ್ದಾರೆ. ಇಂತಹ ಮತ್ತು ಎಂತೆಂತಹದೋ ಮನಸ್ಥಿತಿಗಳ ತರುಣರಿಗೆ ಮಾದರಿಯಾಗಿದ್ದಾರೆ ಕುಶಾಲನಗರದ ಕರಿಯಪ್ಪ ಬಡಾವಣೆಯ ನಿವಾಸಿ ಯುವ ರೈತ ಡಿ.ವಿ.ರಾಜೇಶ್.
ಬರೋಬ್ಬರಿ ನಾಲ್ಕು ವರ್ಷಗಳ ಹಿಂದೆ ಬಟಾ ಬಯಲಾಗಿದ್ದ ಐದು ಎಕರೆ ಬರಡು ನೆಲದಲ್ಲಿ ಗಿಡ ಮರಗಳನ್ನು ನೆಟ್ಟು ಬೆಳೆಸಿ ಭೂಮಿಯ ಒಡಲನ್ನು ಹಸಿರಾಗಿಸಿದ ಈ ಕಾಯಕ ಜೀವಿ, ತನ್ನ ತಾಯಿ ದಶಕಗಳ ಹಿಂದೆ ಕಟ್ಟಿದ್ದ ಕಾಫಿ ತೋಟದ ಒಡತಿಯಾಗಬೇಕೆಂಬ ಕನಸನ್ನು ನನಸು ಮಾಡುವಲ್ಲಿ ಪಟ್ಟಿರುವ ಶ್ರಮ ಇತರ ಯುವಕರಿಗೆ ಆದರ್ಶವಾಗಿದೆ.
ತನ್ನ ತಾಯಿಯ ವಿವಾಹದ ಸಂದರ್ಭದಲ್ಲಿ ತಂದೆಯ ಕುಟುಂಬಸ್ಥರು ಮಡಿಕೇರಿಯಲ್ಲಿ ಕಾಫಿ ತೋಟವಿದೆ ಎಂದು ಹೇಳಿ, ತಾಯಿಯ ಮನದಲ್ಲಿ ಕವಿದಿದ್ದ ನಿರಾಸೆ ಎಂಬ ಕಾರ್ಮೋಡವನ್ನು ಸರಿಸಲು ಛಲ ತೊಟ್ಟ ಈ ಸುಪುತ್ರ ರಾಜೇಶ್ ಕುಶಾಲನಗರದ ಪಿರಿಯಾಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಹುಣಸೆವಾಡಿ ಎಂಬಲ್ಲಿ ಬಟಾ ಬಯಲಿನಂತಿದ್ದ ನಾಲ್ಕು ಎಕರೆ ಭೂಮಿಯನ್ನು ಅಲ್ಲಿನ ರೈತರೊಬ್ಬರಿಂದ ಖರೀದಿಸಿದರು. ಬಳಿಕ ಆಯಕಟ್ಟಿನ ಜಾಗದಲ್ಲಿ ತೆಗೆಸಿದ ಕೊಳವೆ ಬಾವಿಯಲ್ಲಿ ಬಂದ ಯಥೇಚ್ಛ ಪ್ರಮಾಣದ ನೀರು, ಜೀವಜಲವನ್ನೇ ಕಾಣದೇ ಬಾಯ್ದೆರೆದು ನಿಂತ ಇಡೀ ಐದು ಎಕರೆ ವಿಶಾಲ ವಿಸ್ತೀರ್ಣದ ಭೂಮಿಯನ್ನು ತಣಿಸಿತು. ಬಳಿಕ ದಣಿವಾರಿಸಿಕೊಂಡ ಭೂಮಿಯ ಒಡಲು, ಈ ಯುವ ರೈತ ರಾಜೇಶ್ ನೆಟ್ಟ ಎಲ್ಲಾ ಜಾತಿಯ ಗಿಡ ಹಾಗೂ ಬಳ್ಳಿಗಳನ್ನು ತನ್ನೊಳಗೆ ಆವಾಹಿಸಿಕೊಂಡು ಕೆಲವೇ ದಿನಗಳಲ್ಲಿ ಮೊಳಕೆಯಾಗಿ ಚಿಗುರೊಡೆದವು. ಕೆಲವೇ ತಿಂಗಳ ಹಿಂದೆ ಬಂಜರು ಹಾಗೂ ಬರಡಿನಿಂದ ಕೂಡಿದ್ದಂತಹ ಭೂಮಿಯಲ್ಲಿ ಫಳಫಳನೆ ಬೆಳೆದ ಗಿಡ ಬಳ್ಳಿಗಳು ಈಗ ನಳನಳಿಸಿ ಮರಗಳಾಗುತ್ತಿವೆ.
ಈಗ ಈ ಯುವ ರೈತನ ಸರಹದ್ದಿನಲ್ಲಿ ತಾಯಿಯ ಕನಸು ನನಸಾಗಿಸುವ 2200 ರೊಬೆಸ್ಟಾ ಡಾರ್ಫ್ ಕಾಫಿ ಗಿಡಗಳು ಕಳೆದ ಎರಡು ವರ್ಷಗಳಿಂದ ಫಸಲು ಕೊಡುತ್ತಿವೆ. 150 ತೆಂಗಿನ ಮರಗಳಲ್ಲಿ ಎಳನೀರು ಹಾಗೂ ತೆಂಗು ತೂಗಾಡುತ್ತಿವೆ. 1200 ಸಿಲ್ವರ್ ಮರಗಳು ಹೆಮ್ಮರವಾಗಿ ಬೆಳೆಯುತ್ತಾ ಇಡೀ ಸರಹದ್ದಿಗೆ ನೆರಳು ನೀಡುತ್ತಿವೆ. ಅಲ್ಲದೇ ತಮ್ಮೊಡನೆ 1000 ಕ್ಕೂ ಹೆಚ್ಚಿನ ಕಪ್ಪು ಬಂಗಾರ ಎಂಬ ಕಾಳು ಮೆಣಸು ಬಳ್ಳಿಗಳನ್ನು ಬೆಳೆಸುತ್ತಿವೆ. 250 ಏಲಕ್ಕಿ ಬುಡಗಳಿವೆ. 25 ಹಲಸಿನ ಮರಗಳು ಫಲ ನೀಡುತ್ತಿವೆ. 50 ಮಹಾಘನಿ ಗಿಡಗಳು ಮರಗಳಾಗುತ್ತಿವೆ. ಸಫೆÇೀಟ, ಪಪ್ಪಾಯ, ಬಾಳೆ, ಫ್ಯಾಷನ್ ಫ್ರೂಟ್, ಕಿತ್ತಳೆ, ಸೀಬೆ, ನೆಲ್ಲಿ, ಹಿರಳೆ ಹೀಗೆ ಹದಿನೈದಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಜೊತೆಗೆ ಮನೆಗೆ ಬಳಕೆಯಾಗುವ ತರಕಾರಿ ಕಾಯಿಪಲ್ಲೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.
ಮಳೆಯಾಶ್ರಿತ ಪ್ರದೇಶವಾದ ಈ ಪ್ರದೇಶದಲ್ಲಿ ತಮ್ಮ ಪಾಲಿನ ಭೂಮಿಯನ್ನು ಹಸಿರು ತೋಟವಾಗಿಸಲು ನಿರಾಸಕ್ತಿ ತಳೆದಿರುವ ಕೃಷಿಕರನೇಕರು, ಈ ಯುವ ರೈತನ ಸಾಹಸ ಹಾಗೂ ಸಾಧನೆಯನ್ನು ಕಣ್ಣಾರೆ ಕಂಡು ರೋಮಾಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸುತ್ತಲಿನ ತಮ್ಮ ಬಯಲು ಹಾಗೂ ಬರಡು ಭೂಮಿಯಲ್ಲಿ ಹಸಿರು ಮೂಡಿಸಿ ತೋಟವಾಗಿಸುವ ಬಗ್ಗೆ ಈ ರಾಜೇಶ್‍ರಿಂದ ಪ್ರೇರಣೆ ಪಡೆಯುತ್ತಿದ್ದಾರೆ.
ಪ್ರತಿ ವರ್ಷದ ಮುಂಗಾರಿನಲ್ಲಿ ಮುಂಗಾರು ಮಳೆಯನ್ನು ನಂಬಿ ಕೇವಲ ಮುಸುಕಿನ ಜೋಳದ ಬೆಳೆಯನ್ನು ಬೆಳೆದು ಬಳಿಕ ನೀರಿನ ಅನಾನುಕೂಲತೆಯಿಂದ ಪಾಳು ಬಿಡುತ್ತಿದ್ದ ಭೂಮಿಯನ್ನು ತೋಟ ಮಾಡುವ ಕಲೆಯನ್ನು ರಾಜೇಶ್ ಸುತ್ತಲಿನ ರೈತರಿಗೆ ತಿಳಿಸುತ್ತಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ರಾಜೇಶ್, ನನ್ನ ತಂದೆ ಡಿ.ಎಸ್. ವೇಣುಗೋಪಾಲ್ ನೀರಾವರಿ ಇಲಾಖೆಯಲ್ಲಿ ವಾಹನ ಚಾಲಕರಾಗಿ 35 ವರ್ಷ ಕರ್ತವ್ಯ ಗೈದು ನಿವೃತ್ತಿಯಾದರು. ನಮ್ಮ ತಾಯಿ ಇಂದಿರಮ್ಮ ಗೃಹಿಣಿ. ನಾವು ಐವರು ಮಕ್ಕಳು. ಸಹಜವಾಗೇ ಸಂಪಾದನೆ ಕಡಿಮೆ. ವೆಚ್ಚ ಹೆಚ್ಚು. ಆದಾಗ್ಯೂ ನಾನು ನನ್ನ ಸಂಪಾದನೆಯ ಒಂದೊಂದು ರೂಗಳನ್ನು ಕೂಡಿಸಿ ಜೋಡಿಸಿ ತಾಯಿಯ ಆ ಕನಸನ್ನು ನನಸಾಗಿಸಲೇಬೇಕೆಂಬ ಪಣ ತೊಟ್ಟೆ. ಸ್ನೇಹಿತರ ಸಲಹೆ, ಕೆಲವು ಆಪ್ತರ ಸಹಾಯ ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆದು ನಾಲ್ಕು ವರ್ಷಗಳ ಹಿಂದೆ ಜಾಗವನ್ನು ಖರೀದಿಸಿದೆ. ಕ್ರಮೇಣ ಶ್ರಮ ಹಾಕಿ ಆ ಖಾಲಿ ಜಾಗದಲ್ಲಿ ಎಲ್ಲರೂ ಅಚ್ಚರಿಪಡುವ ತೋಟವಾಗಿ ಮಾಡಿದೆ. ಇದು ನನ್ನ ಪಾಲಿನ ತಾಯೊಡಲೇ ಹೌದು. ಈಗ ಇಲ್ಲೇ ಒಂದು ಮನೆಯನ್ನು ಕಟ್ಟಿದ್ದೇನೆ. ತಾಯಿಯ ಕೈನಿಂದಲೇ ಆ ಮನೆಯನ್ನು ಪೂಜಿಸಿ ವಾಸಕ್ಕೆ ಬರುತ್ತೇನೆ. ಇನ್ನೂ ತೋಟದಲ್ಲಿ ಪಕ್ಷಿಗಳಿಗೆಂದೇ ಬಗೆ ಬಗೆಯ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದೇನೆ.
ಪಕ್ಷಿಗಳ ಕಲರವ, ಪ್ರಶಾಂತ ಪರಿಸರ, ಹಚ್ಚಹಸಿರ ಗಿಡ ಮರಗಳ ಒಳಗೆ ತೂರಿ ಬರುವ ತಂಗಾಳಿ ಇಲ್ಲಿ ಬರುವ ಪ್ರತಿಯೊಬ್ಬರ ಮನವನ್ನು ಆಹ್ಲಾದಗೊಳಿಸುತ್ತಿದೆ. ಇಲ್ಲಿಗೆ ಬಂದು ನೋಡುವ ನನ್ನ ಸ್ನೇಹಿತರು ಹಾಗೂ ಇತರರಿಗೆ ನನ್ನ ತೋಟ ಪ್ರೇರಣೆ ಆಗಿದೆ. ಹಲವು ಮಂದಿ ನನ್ನ ಬಳಿ ಗಿಡ ಬಳ್ಳಿಗಳನ್ನು ಬೆಳೆಸುವ ಬಗೆಯ ಮಾಹಿತಿ ಪಡೆಯುತ್ತಿದ್ದಾರೆ. ನಾನೊಬ್ಬನೇ ಬದುಕುವುದಲ್ಲ. ಎಲ್ಲರೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಸಿಗದೇ ಪರಿತಪಿಸುತ್ತಿರುವ ನನ್ನಂತಹ ವಿದ್ಯಾವಂತ ಯುವಕರು ಹೀಗೆ ತೋಟದ ಕೃಷಿಯತ್ತ ಆಕರ್ಷಿತರಾಗಬೇಕು. ಭೂಮಿ ತಾಯಿ ಬಂಜೆಯಲ್ಲ. ಬೆವರು ಹರಿಸುವ ಪ್ರತಿಯೊಬ್ಬರಿಗೂ ಈ ಮಣ್ಣು, ಹೊನ್ನು ಕೊಡುತ್ತದೆ ಎಂಬುದಕ್ಕೆ ನನ್ನ ಪರಿಶ್ರಮವೇ ಸಾಕ್ಷಿಯಾಗಿದೆ.
ಎರಡು ವರ್ಷ ಕಷ್ಟಪಟ್ಟರೆ ಜೀವನವಿಡೀ ತೋಟ ನಮ್ಮನ್ನು ಸಾಕುತ್ತದೆ ಎಂಬ ಸತ್ಯ ಅರಿಯಬೇಕು. "ಕೃಷಿ"ಯನ್ನು "ಖುಷಿ"ಯಾಗಿ ಸ್ವೀಕರಿಸಿರುವ ಯಾರೊಬ್ಬರು "ಕೃಷ"ವಾದ ಪ್ರಸಂಗಗಳಿಲ್ಲ ಎಂದು ಹೇಳುವ ಕಾಯಕ ಜೀವಿ ರಾಜೇಶ್ ತೋಟದಲ್ಲಿ ಎರಡು ಕಾರ್ಮಿಕ ಕುಟುಂಬಗಳು ಆಶ್ರಯ ಪಡೆದಿವೆ.
ಬರಡು ಭೂಮಿಯಲ್ಲಿ ತೋಟ ಮಾಡುವ ಆಸಕ್ತಿ ಇರುವವರು ರಾಜೇಶ್ ಅವರನ್ನು 98450 08692 ಇಲ್ಲಿ ಸಂಪರ್ಕಿಸಬಹುದು.
- ಕೆ.ಎಸ್. ಮೂರ್ತಿ