ಕೂಡಿಗೆ, ನ. 3: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಮತ್ತು ಅದರ ನದಿ ಪಾತ್ರದ ಜಾಗದ ಹೂಳು ಎತ್ತುವಿಕೆಯ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಹಾರಂಗಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಹಾರಂಗಿ ಅಣೆಕಟ್ಟೆಯ ಹೂಳು ಎತ್ತುವಿಕೆ ವಿಚಾರವನ್ನು ಚರ್ಚೆ ಮಾಡಲಾಗಿ ಸರಕಾರದಿಂದ ಅನುಮೋದನೆ ದೊರೆತ್ತಿದ್ದು, ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ. 130. ಕೋಟಿ ವೆಚ್ಚದಲ್ಲಿ ಹೂಳು ಎತ್ತುವಿಕೆಗೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಇದನ್ನು ಕಾರ್ಯಗತಗೊಳಿಸಲು ಅಂತಿಮವಾಗಿ ಸರಕಾರದ ಹಣಕಾಸು ವಿಭಾಗದಿಂದ ಮುಂದಿನ ದಿನಗಳಲ್ಲಿ ಮೊದಲ ಹಂತದ ಹಣ ಬಿಡುಗಡೆಯಾದ ತಕ್ಷಣವೇ ಕಾವೇರಿ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಹಾರಂಗಿ ಅಣೆಕಟ್ಟೆಯ ಹಿಂಬದಿಯಲ್ಲಿ ಸಂಗ್ರಹವಾದ ಹೂಳು ಸೇರಿದಂತೆ ಕಟ್ಟೆಗೆ ಹರಿದು ಬರುವ ನದಿ ಭಾಗದಲ್ಲಿಯೂ ಹೂಳನ್ನು ತೆಗೆಯುವ ಕೆಲಸವನ್ನು ಪಾರಂಭಿಸಲಾಗುವುದು. ಇದರಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಮಟ್ಟ ಹೆಚ್ಚುವರಿಯಾಗಿ ಜಿಲ್ಲೆಯ ರೈತರಿಗೆ ಬೇಸಿಗೆ ಬೆಳೆಗೆ ಬೇಸಾಯ ಮಾಡಲು ಒದಗಿಸಲಾಗುವುದು ಎಂದು ತಿಳಿಸಿದರು.

ಮಳೆಗಾಲದ ಸಂದರ್ಭ ಹಾರಂಗಿ ಅಣೆಕಟ್ಟೆಯಲ್ಲಿ ನೀರು ಬೇಗ ತುಂಬಲು ಹೂಳು ಕಾರಣವಾಗಿದೆ. ಅಲ್ಲದೆ ಹೂಳು ತುಂಬಿರುವುದರಿಂದ ಅಣೆಕಟ್ಟೆಯಿಂದ ಹೆಚ್ಚಾಗಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಹಾರಂಗಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಭಾರೀ ಅನಾಹುತಗಳು ಆಗಿವೆ. ಇವುಗಳನೆಲ್ಲಾ ಅರಿತು ಶೀಘ್ರವಾಗಿ ಅಣೆಕಟ್ಟೆಯಿಂದ ಹೂಳು ಎತ್ತುವಿಕೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.