ಶಿರಾದಲ್ಲಿ ಶೇ. 77.34 ರಷ್ಟು ಮತದಾನ

ಬೆಂಗಳೂರು, ನ. 3: ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಆರ್‍ಆರ್ ನಗರದಲ್ಲಿ ಅತಿ ಕಡಿಮೆ ಹಾಗೂ ಶಿರಾದಲ್ಲಿ ಹೆಚ್ಚು ಮತದಾನವಾಗಿದೆ. ಕೊರೊನಾ ಮುಂಜಾಗ್ರತೆಯೊಂದಿಗೆ ಇಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಎರಡೂ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆರ್‍ಆರ್ ನಗರದಲ್ಲಿ ಸಂಜೆ ಐದು ಗಂಟೆಯವರೆಗೆ ಶೇ. 39.05 ರಷ್ಟು ಮತದಾನವಾಗಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಕೊರೊನಾ ಹೊರತಾಗಿಯೂ ಬಿರುಸಿನ ಮತದಾನ ನಡೆದಿದ್ದು, ಸಂಜೆ ಐದು ಗಂಟೆಯವರೆಗೆ ಶೇ. 77.34 ರಷ್ಟು ಮತದಾನವಾಗಿದೆ. ಆರ್‍ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್‍ನಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದರೆ. ಶಿರಾದಲ್ಲಿ ಕಾಂಗ್ರೆಸ್‍ನಿಂದ ಟಿ.ಬಿ. ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್‍ನ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ. ಎರಡು ಕ್ಷೇತ್ರಗಳಿಂದ, ಒಟ್ಟು 1,008 ಬೂತ್‍ಗಳನ್ನು ಸ್ಥಾಪಿಸಲಾಗಿತ್ತು. ಎಲ್ಲಾ ಬೂತ್‍ಗಳಲ್ಲೂ ಥರ್ಮಲ್ ಸ್ಕ್ಯಾನರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಪಾಸಿಟಿವ್ ಇದ್ದವರು ಕೂಡ ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಭಯೋತ್ಪಾದಕ ದಾಳಿ : 5 ಸಾವು

ವಿಯೆನ್ನಾ, ನ. 3: ವಿಯೆನ್ನಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಗೆ ಬರುವುದಕ್ಕೂ ಕೆಲವೇ ಗಂಟೆಗಳ ಮುನ್ನ ಭಯೋತ್ಪಾದಕ ದಾಳಿ ನಡೆದಿದ್ದು, 5 ಮಂದಿ ಸಾವನ್ನಪ್ಪಿ 15 ಮಂದಿಗೆ ಗಾಯಗಳುಂಟಾಗಿವೆ. ವಿಯೆನ್ನಾದ ಹೃದಯ ಭಾಗದಲ್ಲಿ ಈ ದಾಳಿ ನಡೆದಿದೆ ಎಂದು ಆಸ್ಟ್ರಿಯಾದ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಗೃಹ ಸಚಿವ ಕಾರ್ಲ್ ನೆಹಮ್ಮರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಅಸುನೀಗಿದ್ದು, ಶಂಕಿತ, ಬಂದೂಕುಧಾರಿ ಉಗ್ರನನ್ನು ಪೆÇಲೀಸರು ಎನ್‍ಕೌಂಟರ್ ಮಾಡಿದ್ದಾರೆ. ವಿಯೆನ್ನಾದ ಜನತೆಗೆ ಮನೆಯಲ್ಲಿಯೇ ಇರಲು ಸೂಚನೆ ನೀಡಲಾಗಿದೆ. ಗಾಯಗೊಂಡವರ ಪೈಕಿ ಓರ್ವ ಪೆÇಲೀಸ್ ಅಧಿಕಾರಿಯೂ ಇದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡ್ರಗ್ಸ್ ನಟಿಯರಿಗೆ ಜೈಲೇ ಗತಿ

ಬೆಂಗಳೂರು, ನ. 3: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ತಿರಸ್ಕರಿಸಿದೆ. ಜಾಮೀನು ಕೋರಿ ರಾಗಿಣಿ, ಸಂಜನಾ ಹಾಗೂ ಇತರ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ, ಅಕ್ಟೋಬರ್ 24 ರಂದು ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ. ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ನಟಿಯವರಿಗೆ ತೀವ್ರ ನಿರಾಶೆಯಾಗಿದೆ.

ಪ್ರಕಾಶ್ ರೈ-ತಮನ್ನಾಗೆ ಕೋರ್ಟ್ ನೋಟೀಸ್

ಚೆನ್ನೈ, ನ. 3: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟ-ನಟಿಯರಾದ ಪ್ರಕಾಶ್ ರೈ, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೋಟೀಸ್ ನೀಡಿದೆ. ಆನ್‍ಲೈನ್ ಜೂಜಾಟದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹೀರಾತುಗಳಲ್ಲಿ ನಟಿಸಿರುವ ಕೊಹ್ಲಿ, ತಮನ್ನಾ, ಗಂಗೂಲಿ, ರಾಣಾ ಮತ್ತು ಪ್ರಕಾಶ್ ರಾಜ್‍ಗೆ ಮದ್ರಾಸ್ ಹೈಕೋರ್ಟ್ ನೋಟೀಸ್ ನೀಡಿದ್ದು ತಾ. 19 ರೊಳಗೆ ಉತ್ತರಿಸುವಂತೆ ಸೂಚಿಸಿದೆ. ತಮಿಳುನಾಡಿನಲ್ಲಿ ಜೂಜಾಟಕ್ಕೆ ಬಳಸಿದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದೆ ಬರೋಬ್ಬರಿ 9 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಚೆನ್ನೈ ಮೂಲದ ವ್ಯಕ್ತಿ, ಆನ್‍ಲೈನ್ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆ್ಯಪ್‍ಗಳನ್ನು ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ಎನ್‍ಕೌಂಟರ್‍ಗೆ ಮವೋವಾದಿ ಬಲಿ

ತಿರುವನಂತಪುರ, ನ. 3: ಕೇರಳ ಪೆÇಲೀಸ್ ಪಡೆಯ ಥಂಡರ್ ಬೋಲ್ಟ್ ಕಮಾಂಡೋ ನಡೆಸಿದ ಎನ್‍ಕೌಂಟರ್‍ನಲ್ಲಿ ಒಬ್ಬ ಮಾವೋವಾದಿ ಬಲಿಯಾಗಿದ್ದಾನೆ. ಕೇರಳದ ವಾಯನಾಡ್ ಜಿಲ್ಲೆಯ ಬಣಾಸುರಮನೆ ಬಳಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಥಂಡರ್ ಬೋಲ್ಟ್ ಕಮಾಂಡೊಗಳು ಗುಸ್ತು ತಿರುಗುತ್ತಿದ್ದು ಈ ವೇಳೆ ಮೂವರು ಶಂಕಿತ ಮಾವೋವಾದಿಗಳು ಪ್ರತ್ಯಕ್ಷರಾಗಿದ್ದಾರೆ. ಈ ವೇಳೆ ಕಮಾಂಡೋ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಿಕಿ ನಡೆದಿದ್ದು ಇದರಲ್ಲಿ ಓರ್ವ ಮಾವೋವಾದಿ ಹತ್ಯೆಯಾಗಿದ್ದಾನೆ. ಇನ್ನುಳಿದಂತೆ ಇಬ್ಬರು ಮಾವೋವಾದಿಗಳ ಅಲ್ಲಿಂದ ಪರಾರಿಯಾಗಿದ್ದಾರೆ. ಕಮಾಂಡೋ ಪಡೆಗಳು ಘಟನಾ ಸ್ಥಳದಲ್ಲಿ ಕೆಲ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮೃತ ಮಾವೋವಾದಿ ಗುರುತು ಪತ್ತೆಯಾಗಿಲ್ಲ.

ಬಿಹಾರದಲ್ಲಿ ಶಾಂತಿಯುತ ಮತದಾನ

ಪಾಟ್ನಾ, ನ. 3: ಮಾರಕ ಕೊರೊನಾ ವೈರಸ್ ಹಾವಳಿ ನಡುವೆಯೂ ಹೈವೋಲ್ಟೇಜ್ ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಲ್ಲಿ 94 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಚುನಾವಣೆ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ನಕ್ಸಲರ ಉಪಟಳ ಇರುವ ಎಂಟು ಕ್ಷೇತ್ರಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಕೊರೊನಾ ಹಾವಳಿ ಹಿನ್ನೆಲೆ ಚುನಾವಣೆಗಾಗಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಮತದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಫೇಸ್ ಮಾಸ್ಕ್ ಧರಿಸಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು. ಬಿಹಾರ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,463 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 2.86 ಕೋಟಿ ಮತದಾರರು ಸ್ಪರ್ಧಿಗಳ ಭವಿಷ್ಯ ನಿರ್ಧರಿಸಿದ್ದಾರೆ. ಇವರಲ್ಲಿ 146 ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ಸಹ ಕಣದಲ್ಲಿದ್ದಾರೆ. ನಕ್ಸಲ್ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುವುದರಿಂದ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಹೊರತಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಿಹಾರ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ದೇಗುಲದಲ್ಲಿ ನಮಾಜ್: ನಾಲ್ವರ ಮೇಲೆ ಎಫ್‍ಐಆರ್

ಮಥುರಾ, ನ. 3: ಅನುಮತಿ ಇಲ್ಲದೆ ಮಥುರಾದ ನಂದ ಬಾಬಾ ದೇಗುಲದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಖುದಾಯಿ ಖಿದ್ ಮತ್ ಗರ್ ಸಂಘಟನೆಯ ಸಂಸ್ಥಾಪಕ ದೆಹಲಿ ಮೂಲದ ಫೈಜಲ್ ಖಾನ್ ಎಂಬಾತನನ್ನು ಬಂಧಿಸಿರುವ ಪೆÇಲೀಸರು ಉತ್ತರಪ್ರದೇಶಕ್ಕೆ ಕರೆತಂದಿದ್ದಾರೆ ಎಂದು ಮಥುರಾ ಎಸ್‍ಎಸ್‍ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ. ಫೈಜಲ್ ಖಾನ್ ಹಾಗೂ ಚಾಂದ್ ಮೊಹಮ್ಮದ್ ಇಬ್ಬರು ಮಥುರಾ ದೇಗುಲದಲ್ಲಿ ನಮಾಜ್ ಮಾಡಿದ್ದರು. ಇದನ್ನು ಅಲೋಕ್ ರತನ್ ಹಾಗೂ ನೀಲೇಶ್ ಗುಪ್ತಾ ಎಂಬುವರು ಫೆÇೀಟೋ ಮತ್ತು ವೀಡಿಯೋ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಫೆÇೀಟೋ ಮತ್ತು ವೀಡಿಯೋಗಳು ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಥುರಾ ದೇಗುಲದ ಪೂಜಾರಿ ಕನ್ಹಾ ಗೋಸ್ವಾಮಿ ಅವರು ಪ್ರಕರಣ ಸಂಬಂಧ ದೂರು ನೀಡಿದ್ದರು.