ಸೋಮವಾರಪೇಟೆ, ನ.3: ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ನಳಿನಿ ಗಣೇಶ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‍ನ ಸಂಜೀವ ಅವರುಗಳು ಆಯ್ಕೆಯಾಗಿದ್ದಾರೆ.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ವಾರ್ಡ್ 3ರ ಬಿಜೆಪಿ ಸದಸ್ಯೆ ನಳಿನಿ ಗಣೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ಯಾರೂ ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯಿತು. ಪರಿಶಿಷ್ಟ ಜಾತಿ ಮೀಸಲಾತಿ ಇದ್ದುದರಿಂದ ಬಿಜೆಪಿಯ ನಳಿನಿ ಮತ್ತು ಪಿ.ಕೆ. ಚಂದ್ರು ಅವರುಗಳು ಅರ್ಹತೆ ಪಡೆದಿದ್ದರು.ನಳಿನಿ ಗಣೇಶ್ ಅವರಿಗೆ ಪ್ರಾರಂಭದ 12 ತಿಂಗಳು, ನಂತರದ 18 ತಿಂಗಳು ಪಿ.ಕೆ. ಚಂದ್ರು ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಂಡಿದ್ದು, ಅದರಂತೆ ಪಿ.ಕೆ. ಚಂದ್ರು ಅವರು ಕಣದಿಂದ ಹಿಂದೆ ಸರಿದರು. ನಿನ್ನೆ ಕುಶಾಲನಗರದ ರೆಸಾರ್ಟ್‍ವೊಂದರಲ್ಲಿ ಬಿಜೆಪಿ ಸದಸ್ಯರು ಮತ್ತು ನಾಯಕರ ನಡುವೆ ಸಭೆ ನಡೆದಿದ್ದು, ಅದರಂತೆ ಇಂದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.ಹಿಂದುಳಿದ ವರ್ಗ ಎ. ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಜಯಗಳಿಸಿದ್ದ ವಾರ್ಡ್ 4ರ ಸದಸ್ಯ ಸಂಜೀವ ನಾಮಪತ್ರ ಸಲ್ಲಿಸಿದ್ದು, ಇತರರು ಯಾರೂ ಸ್ಪರ್ಧಿಸದ ಹಿನ್ನೆಲೆ ಅವಿರೋಧ ಆಯ್ಕೆ ನಡೆಯಿತು.

ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಆ ಮೈತ್ರಿ ಇಂದಿನ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಮುಂದುವರೆಯಿತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ 7 ಸದಸ್ಯರಿದ್ದು, ಪ್ರಥಮ ಅವಧಿಯ 15 ತಿಂಗಳು ಕಾಂಗ್ರೆಸ್‍ನ ಸಂಜೀವ ಅವರಿಗೆ ಉಪಾಧ್ಯಕ್ಷ ಸ್ಥಾನ, ನಂತರದ 15 ತಿಂಗಳು ಅವಧಿಯಲ್ಲಿ

(ಮೊದಲ ಪುಟದಿಂದ) ಜೆಡಿಎಸ್‍ನ ನಾಗರತ್ನ ಅವರಿಗೆ ಉಪಾಧ್ಯಕ್ಷ ಸ್ಥಾನ, ಪ್ರಥಮ ವರ್ಷದಲ್ಲಿ ಜೆಡಿಎಸ್‍ನ ಜಯಂತಿ ಶಿವಕುಮಾರ್‍ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಒಡಂಬಡಿಕೆ ಏರ್ಪಟ್ಟಿದ್ದು, ಅದರಂತೆ ಮೈತ್ರಿ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿ ಉಪಾಧ್ಯಕ್ಷ ಸ್ಥಾನ ಪಡೆದಿದ್ದರಿಂದ, ಸೋಮವಾರಪೇಟೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಊಹಾಪೋಹಗಳಿದ್ದವು. ಆದರೆ ಜೆಡಿಎಸ್‍ನ ಜೀವಿಜಯ ಅವರು ವರಿಷ್ಠರೊಂದಿಗೆ ಒಂದಿಷ್ಟು ಮುನಿಸಿಕೊಂಡಿರುವ ಹಿನ್ನೆಲೆ, ಸ್ಥಳೀಯವಾಗಿ ರಾಜಕೀಯ ಲೆಕ್ಕಾಚಾರ ಬದಲಾಯಿತು.

ಚುನಾವಣಾ ಪೂರ್ವದಲ್ಲಿ ಜೀವಿಜಯ ಅವರ ನಾಯಕತ್ವದಲ್ಲೇ ಮೈತ್ರಿ ಏರ್ಪಟ್ಟಿದ್ದರಿಂದ, ಅವರ ಮಾರ್ಗದರ್ಶನದಂತೆ ಸೋಮವಾರಪೇಟೆ ಪ.ಪಂ.ನಲ್ಲಿ ಮೈತ್ರಿ ಮುಂದುವರೆಸಲಾಗಿದೆ ಎಂದು ಜೆಡಿಎಸ್‍ನ ನಾಯಕರೋರ್ವರು ತಿಳಿಸಿದರು.

ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ 3 ಗಂಟೆಯ ವೇಳೆಗೆ ಫಲಿತಾಂಶ ಹೊರಬಿದ್ದಿತು. ಪ.ಪಂ. ಹೊರಭಾಗದಲ್ಲಿ ನೆರೆದಿದ್ದ ಮೂರೂ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಜಯಘೋಷ ಮೊಳಗಿಸಿದರು.

ಶಾಸಕ ಅಪ್ಪಚ್ಚುರಂಜನ್ ಹಾಗೂ ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಆರ್. ಮಂಜುಳ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ ಅವರುಗಳ ಮುಂದಾಳತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಉಪಾಧ್ಯಕ್ಷ ಸ್ಥಾನ ಮೈತ್ರಿ ಪಕ್ಷಗಳ ಪಾಲಾದ ಹಿನ್ನೆಲೆ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್, ಮುಖಂಡರಾದ ಎಸ್.ಎಂ. ಡಿಸಿಲ್ವಾ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳ ಮುಂದಾಳತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸಂಜೀವ ಅವರನ್ನು ಅಭಿನಂದಿಸಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಡಿವೈಎಸ್‍ಪಿ. ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿಗಳಾದ ವಿನಯ್‍ಕುಮಾರ್, ಶಿವಶಂಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.