ವೀರಾಜಪೇಟೆ, ನ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯಿಂದ ನಾಲ್ಕನೇ ವಾರ್ಡ್‍ನ ಟಿ.ಆರ್.ಸುಶ್ಮಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಪಕ್ಷಗಳ ನಡುವೆ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 13ನೇ ವಾರ್ಡ್‍ನ ಬಿಜೆಪಿ ಪಕ್ಷದ ಕೆ.ಬಿ.ಹರ್ಷವರ್ಧನ್ ಆಯ್ಕೆಯಾಗಿದ್ದಾರೆ.ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇಲ್ಲಿನ ಪುರಭವನದಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ಚುನಾವಣಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರ ಸಮ್ಮುಖದಲ್ಲಿ ಆರಂಭವಾಯಿತು. ಸರಕಾರದ ಮೀಸಲಾತಿಯನ್ವಯ ಅಧ್ಯಕ್ಷ ಪದವಿಗೆ ಪರಿಶಿಷ್ಟ ಜಾತಿಯ ಮಹಿಳೆ ಟಿ.ಆರ್. ಸುಶ್ಮಿತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸುಶ್ಮಿತಾ ಅವರನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಮೊದಲು ಕಾಂಗ್ರೆಸ್- ಪಕ್ಷೇತರ ಮಿತ್ರ ಕೂಟದ ಹತು-್ತಮಂದಿಯೊಳಗಡೆ ನಡೆದ ಲಾಟರಿಯಲ್ಲಿ ಆಗಸ್ಟಿನ್ ಬೆನ್ನಿ ಆಯ್ಕೆಯಾದುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲು 11.35 ಗಂಟೆಗೆ ನಾಮಪತ್ರ ಸಲ್ಲಿಸಿದರು. ಡೆಮ್ಮಿಯಾಗಿ ವಿ.ಕೆ.ರಜನಿಕಾಂತ್ ಅವರು ನಾಮಪತ್ರ ಸಲ್ಲಿಸಿದರು. ನಂತರ 12.45ಕ್ಕೆ ಬಿಜೆಪಿಯಿಂದ 13ನೇ ವಾರ್ಡ್‍ನ ಕೆ.ಬಿ.ಹರ್ಷವರ್ಧನ್ ನಾಮಪತ್ರ ಸಲ್ಲಿಸಿದರು. ನಾಮಪತ್ರಗಳ ಪರಿಶೀಲನೆಯ ನಂತರ 1.20ಕ್ಕೆ ವಿ.ಆರ್. ರಜನಿಕಾಂತ್ ಅವರು ನಾಮಪತ್ರ ಹಿಂದಕ್ಕೆ ಪಡೆದರು.

ಚುನಾವಣಾಧಿಕಾರಿ ನಂದೀಶ್ ಅವರು ಅಪರಾಹ್ನ 1.25ಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಕೈ ಎತ್ತಿ ಮತಚಲಾಯಿಸಲು ಸೂಚಿಸಿದಾಗ ಎರಡು ಪಕ್ಷಗಳ ನಡುವೆ ತಲಾ ಹತ್ತು ಮತಗಳು ಬಂದುದರಿಂದ ಲಾಟರಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ಮಿತ್ರ ಕೂಟದ ಆಗಸ್ಟೀನ್‍ಬೆನ್ನಿ ಹಾಗೂ ಬಿಜೆಪಿಯ ಹರ್ಷವರ್ಧನ್ ಕಣದಲ್ಲಿ ಉಳಿದಿದ್ದು ಇಬ್ಬರ ನಡುವಿನ ಲಾಟರಿಯಲ್ಲಿ ಹರ್ಷವರ್ಧನ್ ವಿಜೇತರಾದರು.

ಉಪಾಧ್ಯಕ್ಷ ಪದವಿಯ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ

(ಮೊದಲ ಪುಟದಿಂದ) ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪರ ಮತಚಲಾಯಿಸಿದರು.

ಸರಕಾರದ ಮೀಸಲಾತಿಗನುಗು ಣವಾಗಿ ಬಿಜೆಪಿ ಪಕ್ಷದ ವರಿಷ್ಠರು ಸುಶ್ಮಿತಾಳನ್ನು ಮೊದಲ 12 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷ ಪದವಿಯ ಅಧಿಕಾರ ನೀಡಿದ್ದಾರೆ. ಉಳಿದ 18ತಿಂಗಳು ಹದಿನೇಳನೇ ವಾರ್ಡ್‍ನ ಎಚ್.ಎಂ. ಪೂರ್ಣಿಮಾ ಅಧ್ಯಕ್ಷ ಪದವಿಯ ಅಧಿಕಾರದಲ್ಲಿ ಮುಂದುವರೆಯುವಂತೆ ಪಕ್ಷದ ಆಂತರಿಕವಾಗಿ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ.

ಚುನಾವಣೆಯಲ್ಲಿ ಎರಡು ಸ್ಥಾನಗಳು ಬಿಜೆಪಿ ಪಾಲಾದುದರಿಂದ ನೂತನ ಪದಾಧಿಕಾರಿಗಳನ್ನು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಎ. ಭವ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಪಕ್ಷದ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಅಭಿನಂದಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್

ವೀರಾಜಪೇಟೆ ಪಟ್ಟಣ ಪಂಚಾಯಿತಿ ಎರಡು ಪದವಿಗಳ ಚುನಾವಣೆಗಾಗಿ ಡಿವೈಎಸ್‍ಪಿ ಜಯಕುಮಾರ್ ನೇತೃತ್ವದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆ ಗೌಡ, ಪೊಲೀಸ್ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆಯಿಂದಲೇ ಪುರಭವನದ ಸುಮಾರು 100 ಮೀಟರ್ ಸರಹದ್ದಿನಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಇವರುಗಳು ಅಪರಾಹ್ನ 1.15ಕ್ಕೆ ಚುನಾವಣಾ ಸಭಾಂಗಣಕ್ಕೆ ಆಗಮಿಸಿದರು.

ಉಪಾಧ್ಯಕ್ಷ ಸ್ಥಾನದ ಲಾಟರಿ ಪ್ರಕ್ರಿಯೆಯಲ್ಲಿ ಸೋಲನ್ನು ಅನುಭವಿಸಿದ ತಕ್ಷಣ ಕಾಂಗ್ರೆಸ್ ಪಕ್ಷೇತರ ಮಿತ್ರ ಕೂಟದ ಎಲ್ಲ ಹತ್ತು ಮಂದಿ ಸದಸ್ಯರುಗಳು ಚುನಾವಣಾ ಸಭಾಂಗಣದಿಂದ ಹೊರ ನಡೆದರು.

ಚುನಾವಣಾ ಫಲಿತಾಂಶ ವೀಕ್ಷಿಸಲು ಪುರಭವನ ಸಭಾಂಗಣದ ಹೊರಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸಾರ್ವಜನಿ ಕರು ಕುತೂಹಲದಿಂದ ನೆರೆದಿದ್ದರು.