ಕುಶಾಲನಗರ, ನ. 3: ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಅಧ್ಯಕ್ಷರಾಗಿ ಬಿಜೆಪಿಯ ಬಿ. ಜಯವರ್ಧನ್ (ಕೇಶವ) ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ನ ಸುರಯ್ಯಭಾನು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಗಾದಿ ಸಾಮಾನ್ಯ ಮಹಿಳೆ ಮೀಸಲಾತಿ ಅನ್ವಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡುವುದರೊಂದಿಗೆ ಪಂಚಾಯಿತಿ ಅಧಿಕಾರದ ಗದ್ದುಗೆಗೆ ಏರಿವೆ.ಒಟ್ಟು 16 ಮಂದಿ ಸದಸ್ಯ ಬಲದ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ 6 ಮಂದಿ ಬಿಜೆಪಿ, 6 ಮಂದಿ ಕಾಂಗ್ರೆಸ್ ಹಾಗೂ ನಾಲ್ವರು ಜೆಡಿಎಸ್ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಸಂಖ್ಯಾಬಲದ ಕೊರತೆಯಿಂದ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದರೊಂದಿಗೆ ಅಧಿಕಾರದ ಗದ್ದುಗೆ ಪಡೆಯುವಲ್ಲಿ ಯಶಸ್ಸು ಕಂಡಿದೆ. ಕಾಂಗ್ರೆಸ್ನ ಪುಟ್ಟಲಕ್ಷ್ಮಮ್ಮ ಅಧ್ಯಕ್ಷ ಸ್ಥಾನಕ್ಕೆ ಮತ್ತು 11ನೇ ವಾರ್ಡ್ನ ಜಯಲಕ್ಷ್ಮಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದರೂ ತಲಾ 6 ಮತ ಗಳಿಸುವುದರೊಂದಿಗೆ ಪರಾಭವಗೊಳ್ಳ ಬೇಕಾಯಿತು. 5ನೇ ವಾರ್ಡ್ನ ಜಯವರ್ಧನ್ ಮತ್ತು 4ನೇ ವಾರ್ಡ್ನ ಸುರಯ್ಯಭಾನು ತಲಾ 11 ಮತಗಳನ್ನು ಪಡೆದು ವಿಜೇತರಾದರು. ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮತ್ತು ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ಸಿಂಹ ಮತದಾನದಲ್ಲಿ ಪಾಲ್ಗೊಂಡಿದ್ದರು.
ಈ ನಡುವೆ ಜೆಡಿಎಸ್ ಸದಸ್ಯರ ಬಲದೊಂದಿಗೆ ಅಧಿಕಾರ ಹೊಂದುವ ಕಾಂಗ್ರೆಸ್ನ ಒಂದು ಗುಂಪಿನ ಕನಸು ಭಗ್ನವಾದಂತಾಗಿದೆ.
ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಎಸ್. ಆನಂದಕುಮಾರ್ ಮಾತ್ರ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸದೆ ತಟಸ್ಥರಾಗಿ ಉಳಿದರು. ತಾಲೂಕು ತಹಶೀಲ್ದಾರ್ ಗೋವಿಂದರಾಜು ಮತ್ತು ಲೋಹಿತ್ ಕುಮಾರ್ ಅವರುಗಳು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪ್ರತಿಭಟನೆ: ಈ ನಡುವೆ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಪಡೆದಿದೆ ಎಂದು ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಮುಖರು ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ
(ಮೊದಲ ಪುಟದಿಂದ) ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಜೆಡಿಎಸ್ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ ಈ ಸಂದರ್ಭ ಮಾತನಾಡಿ, ಕೋಮುವಾದಿ ಪಕ್ಷದೊಂದಿಗೆ ಕೈಜೋಡಿಸಿದ ಮೂವರು ಪಕ್ಷದ ಸದಸ್ಯರನ್ನು ಪಕ್ಷದಿಂದ ಅಮಾನತುಗೊಳಿಸಲು ಶಿಫಾರಸು ಮಾಡುವುದಾಗಿ ತಿಳಿಸಿದರು. ಆದರೆ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಶಬ್ಬೀರ್ ಅವರು ಪ್ರತಿಕ್ರಿಯಿಸಿ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕುಶಾಲನಗರ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಜೆಡಿಎಸ್ ಪಕ್ಷದ ನೆಲೆ ಭದ್ರಗೊಳ್ಳುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಪಿ. ಶಶಿಧರ್ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದರೊಂದಿಗೆ ಈ ಮೂಲಕ ಜೆಡಿಎಸ್ ನೆಲೆ ಕಳೆದುಕೊಳ್ಳುವುದು ಖಚಿತ ಎಂದರು. ಈ ಸಂದರ್ಭ ಕುಶಾಲನಗರಕ್ಕೆ ಆಗಮಿಸಿದ ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದೊಳಗೆ ಕುಶಾಲನಗರದಲ್ಲಿ ಅಲ್ಪ ಭಿನ್ನಾಭಿಪ್ರಾಯ ಕಂಡುಬಂದಿದ್ದು ಈ ಮೂಲಕ ಅವಕಾಶ ಕೈ ಬಿಟ್ಟಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ, ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಭ ಕಚೇರಿ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.