ಮಡಿಕೇರಿ, ನ. 3: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ, ಮನೆಯ ಬಾಗಿಲಿನ ಬೀಗ ಮುರಿದು ಒಳನುಗಿರುವ ಕಳ್ಳರು ಮನೆಯೊಳಗಡೆ ಇರಿಸಲಾಗಿದ್ದ ಚಿನ್ನಾಭರಣ, ನಿರಖು ಠೇವಣಿಯ ಬಾಂಡ್ ಪತ್ರಗಳನ್ನು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿಗೆ ಸಮೀಪದ ಬಿಳಿಗೇರಿಯಲ್ಲಿ ನಡೆದಿದೆ. ಹಾಡಹಗಲೇ ಈ ಕಳ್ಳತನ ನಡೆದಿದ್ದು, ವ್ಯವಸ್ಥಿತವಾಗಿ ಮಾಡಿರುವ ಕಳವು ಪ್ರಕರಣವನ್ನು ಬೇಧಿಸಲು ಪೊಲೀಸರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದಾರೆ.ಬಿಳಿಗೇರಿ ಶಾಲಾ ರಸ್ತೆಯಲ್ಲಿ ವಾಸವಿರುವ ಮಡಿಕೇರಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರಾದ ಡಾ. ರಾಜಗೋಪಾಲ್ ಅವರ ಮನೆಯಲ್ಲಿ ಕಳ್ಳತನ ಆಗಿದೆ. ನಿನ್ನೆ ಹಗಲು ವೇಳೆ ಈ ಕಳವು ನಡೆದಿದೆ. ಎಂದಿನಂತೆ ವೈದ್ಯ ದಂಪತಿಯರು ವೃತ್ತಿ ನಿಮಿತ್ತ ಮಡಿಕೇರಿಗೆ ಬಂದಿದ್ದ ಸಂದರ್ಭ ಈ ಕುಕೃತ್ಯವೆಸಗಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮನೆಗೆ ಹೊಂಚು ಹಾಕಿ ಕಳವು ಮಾಡಲಾಗಿದೆ. ಮನೆಯ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಮನೆಯೊಳಗಡೆ ಕಪಾಟಿನಲ್ಲಿದ್ದ ರೂ. 8.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಇದರೊಂದಿಗೆ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿದ್ದ ಬಾಂಡ್ ಪತ್ರವನ್ನು ಕದ್ದೊಯ್ದಿದ್ದಾರೆ.
ಖಾರದಪುಡಿ ಎರಚಿ ಪರಾರಿ
ಮನೆಯೊಳಗೆಲ್ಲ ಶೋಧಿಸಿ ಕಳ್ಳತನ ಮಾಡಿದ ಬಳಿಕ ಕಳವು ಮಾಡಿರುವ ಬಗ್ಗೆ ಯಾವುದೇ ಸುಳಿವು ದೊರಕಬಾರದೆಂಬ ದೂರಾಲೋಚನೆ ಯೊಂದಿಗೆ ಮನೆಯ ಒಳಗಡೆ ಹಾಗೂ ಸುತ್ತಲೂ ನಡೆದಾಡುವ ದಾರಿಯಲ್ಲೆಲ್ಲ ಖಾರದ ಪುಡಿ ಚೆಲ್ಲಿದ್ದಾರೆ. ಪೊಲೀಸರು ಹಾಗೂ ಶ್ವಾನದಳದ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಕಳ್ಳರು ಈ ರೀತಿಯ ಉಪಾಯ ಮಾಡಿದ್ದಾರೆ.
ಹಗಲಲ್ಲೆ ಖನ್ನ
ನಿನ್ನ ದಿನ ವೈದ್ಯರು ಮಡಿಕೇರಿ ಯತ್ತ ತೆರಳಿದ ಕೂಡಲೇ ಹೊಂಚು ಹಾಕಿ ಕುಳಿತ್ತಿದ್ದ ಕಳ್ಳರು ಈ ಕೃತ್ಯವೆಸಗಿ ದ್ದಾರೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನದ ಒಳಗಡೆ ಈ ಕಳ್ಳತನ ನಡೆದಿರಬಹು ದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ತಂಡ
ಹಗಲು ವೇಳೆ ನಡೆದ ಈ ಕಳವು ಪ್ರಕರಣವನ್ನು
(ಮೊದಲ ಪುಟದಿಂದ) ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿ ತನಿಖೆಗೆ ಮುಂದಾಗಿದ್ದಾರೆ. ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಡಿವೈಎಸ್‍ಪಿ ದಿನೇಶ್ ಕುಮಾರ್ ಹಾಗೂ ವೃತ್ತ ನರೀಕ್ಷಕ ದಿವಾಕರ್ ನೇತೃತ್ವದಲ್ಲಿ ಮತ್ತೊಂದು ತಂಡ ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಪರಿಚಿತ ಸ್ಥಳೀಯರೇ ಈ ಕೃತ್ಯವೆಸಗಿರಬಹುದೆಂಬ ಬಗ್ಗೆ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆಯಿಂದಷ್ಟೇ ನೈಜಾಂಶ ಹೊರ ಬರಬೇಕಿದೆ.