ನಾಪೋಕ್ಲು, ನ. 3: ಕೊರೊನಾ ಸೋಂಕು ಹರಡುವಿಕೆ ತಡೆಗೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ವೃತ್ತನಿರೀಕ್ಷಕ ದಿವಾಕರ್ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ನಾಪೋಕ್ಲುವಿ ನಲ್ಲಿ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಕೊರೊನಾ ಸೋಂಕು ತಡೆಗೆ ಅಗತ್ಯವಾದ ಮಾಸ್ಕ್, ಸ್ಯಾನಿಟೈಸರ್, ಮುಖಗವಸು, ಹಾಗೂ ಕೈಗವಸುಗಳನ್ನು ವಿತರಿಸಿ ಅವರು ಮಾತನಾಡಿದರು. ಕೊರೊನಾ ಮಾಹಾಮಾರಿಯು ದೇಶದೆಲ್ಲೆಡೆ ವ್ಯಾಪಿಸಿದ್ದು ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಕೊರೊನ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅಗತ್ಯ. ಸಾರ್ವಜನಿಕರು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಜನಸಂದಣಿ ಸ್ಥಳಗಳಲ್ಲಿ ಸೇರದೇ ಇರುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ವೈದ್ಯರು, ವಿವಿಧ ಇಲಾಖೆಯ ನೌಕರರು, ಜನಸಾಮಾನ್ಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸಾಕಷ್ಟು ಪ್ರಾಣಹಾನಿ ಸಂಭವಿಸಿರುವ ಕೊರೊನಾಕ್ಕೆ ಸಂಬಂಧಿಸಿದಂತೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಠಾಣಾಧಿಕಾರಿ ಆರ್.ಕಿರಣ್, ಇಲಾಖಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮೀಪದ ಕಕ್ಕಬ್ಬೆ ಪಟ್ಟಣದಲ್ಲೂ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೈಗವಸುಗಳನ್ನು ವಿತರಿಸಲಾಯಿತು.

- ದುಗ್ಗಳ