ಮಡಿಕೇರಿ, ನ. 3: ಜಿಲ್ಲಾ ಕೇಂದ್ರ ಮಡಿಕೇರಿಯಿಂದ ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ನಗರದಿಂದ ಮೇಕೇರಿ ನಡುವೆ ಆಯ್ದ ಭಾಗದಲ್ಲಿ ಕಾಂಕ್ರೀಟೀಕರಣ ಕಾಮಗಾರಿಯನ್ನು ನಡೆಸುವ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸಂಚಾರ ನಿಷೇಧಿಸಲ್ಪಟ್ಟಿದ್ದ ಮಾರ್ಗದಲ್ಲಿ ಇದೀಗ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ನಿನ್ನೆಯಿಂದ ಈ ಮಾರ್ಗದಲ್ಲಿ ಕೇವಲ ಲಘು ವಾಹನಗಳ ಓಡಾಟಕ್ಕೆ ರಸ್ತೆ ಮುಕ್ತವಾಗಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಆಗಸ್ಟ್ 30 ರಿಂದ ಅಕ್ಟೋಬರ್ 30ರವರೆಗೆ ಎರಡು ತಿಂಗಳ ಕಾಲ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದರು. ಈ ಕಾರಣದಿಂದ ಸಾರ್ವಜನಿಕರು ಬದಲಿ ರಸ್ತೆಯಾದ ಮಡಿಕೇರಿ - ತಾಳತ್‍ಮನೆ - ಮೇಕೇರಿ ಮಾರ್ಗವನ್ನು ಅವಲಂಭಿಸಬೇಕಾಗಿತ್ತು.ಲೋಕೋಪಯೋಗಿ ಇಲಾಖೆ ವತಿಯಿಂದ ಇದೀಗ ಬಹಳಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಸುಮಾರು 1.8 ಕಿ.ಮೀ. ನಷ್ಟು ರಸ್ತೆ ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಂಡಿದೆ. ಉದ್ದೇಶಿತ ಕೆಲಸದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದ್ದರೂ ಇನ್ನಷ್ಟು ಕೆಲಸಗಳ ಅಗತ್ಯವಿರುವದರಿಂದ ಸದ್ಯಕ್ಕೆ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರ ಆರಂಭಗೊಳ್ಳಲು ಇನ್ನಷ್ಟು ಕಾಲಾವಕಾಶಬೇಕಾಗಿದೆ. ಆಯ್ದ ಸ್ಥಳದಲ್ಲಿ ಮತ್ತೆ ಸುಮಾರು 300 ರಿಂದ 350 ಮೀಟರ್‍ನಷ್ಟು ಕೆಲಸ ನಡೆಯಬೇಕಾಗಿದೆ. ಇದು ಮಾತ್ರವಲ್ಲದೆ ಜನರಲ್ ತಿಮ್ಮಯ್ಯ ವೃತ್ತದಿಂದ ಮುಂದೆ ಸಾಗಿದಾಗ ಅನತಿ ದೂರದಲ್ಲಿ ಬರೆ ಕುಸಿತಗೊಂಡಿರುವ ಸ್ಥಳದಲ್ಲಿ ಕೆಳಭಾಗದಿಂದ ಬೃಹತ್ ತಡೆಗೋಡೆಯೊಂದು ನಿರ್ಮಾಣವಾಗಬೇಕಿದ್ದು, ಈ ಕೆಲಸ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಸುಮಾರು ರೂ. 90 ಲಕ್ಷ ವೆಚ್ಚದಲ್ಲಿ ಈ ತಡೆಗೋಡೆಯನ್ನು ನಿರ್ಮಿಸಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಮೇಲ್ಮಟ್ಟದಲ್ಲಿ ವ್ಯವಹರಿಸುತ್ತಿದೆ. ಈ ಕಾಮಗಾರಿಗೆ ಅನುಮೋದನೆ ದೊರೆತಿದೆ ಎನ್ನಲಾಗಿದ್ದರೂ ಇನ್ನಷ್ಟೆ ಆಡಳಿತಾತ್ಮಕ

(ಮೊದಲ ಪುಟದಿಂದ) ಮಂಜೂರಾತಿ ಸಿಗಬೇಕಿದ್ದು, ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ವ್ಯವಹರಿಸುತ್ತಿದ್ದಾರೆ. ಈ ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿರುವದಾಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮದನ್ ಮೋಹನ್ ಅವರು ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಕೇವಲ ಲಘು ವಾಹನಗಳು ಮಾತ್ರ ಸಂಚರಿಸಬಹುದಾಗಿದ್ದು, ತಡೆಗೋಡೆ ನಿರ್ಮಾಣವಾಗದೇ ಭಾರೀ ವಾಹನ ಓಡಾಟ ಕಷ್ಟಕರವಾಗಿರುವದು ಸ್ಥಳಕ್ಕೆ ಭೇಟಿ ನೀಡಿದ್ದ ‘ಶಕ್ತಿ’ಯ ಗಮನಕ್ಕೆ ಬಂದಿದೆ.

ಬಾಕಿ ಇರುವ 300 ರಿಂದ 350 ಮೀಟರ್‍ವರೆಗಿನ ಕೆಲಸ ಸೇರಿದಂತೆ ತಡೆಗೋಡೆ ನಿರ್ಮಾಣಗೊಂಡು ಇದು ಪರಿಪೂರ್ಣವಾಗಲು ಇನ್ನೂ ಒಂದು ತಿಂಗಳ ಸಮಯದ ಅಗತ್ಯತೆ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಕಾಂಕ್ರೀಟ್ ರಸ್ತೆ ಕೆಲಸ ಸದ್ಯಕ್ಕೆ ಪೂರ್ಣಗೊಂಡಿರುವದರಿಂದ ಕೆಲ ದಿನಗಳ ಬಳಿಕ ಬಸ್‍ಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆಯಾದರೂ ನಿರ್ದಿಷ್ಟ ಸ್ಥಳದಲ್ಲಿ ಏಕಮುಖ ಸಂಚಾರದ ಅಗತ್ಯತೆ ಇದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಲೋಕೋಪಯೋಗಿ ಇಲಾಖೆ ಒಂದು ತಿಂಗಳ ಅವಕಾಶ ಕೇಳಿತ್ತು. ಇದೀಗ ಇನ್ನಷ್ಟು ಕೆಲಸ ಬಾಕಿ ಇರುವದರಿಂದ ಈ ಕುರಿತು ಸೂಕ್ತ ಮಾಹಿತಿ ಒದಗಿಸಲು ಸೂಚಿಸಿರುವದಾಗಿ ತಿಳಿಸಿದರು.

ಪ್ರಸ್ತುತ ರೂ. 3.90 ಕೋಟಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟೀಕರಣಗೊಂಡಿದ್ದು, ಉತ್ತಮ ರಸ್ತೆಯೇನೋ ನಿರ್ಮಾಣವಾಗಿದೆ. ಆದರೆ ‘ಶಕ್ತಿ’ ಅವಲೋಕಿಸಿದಂತೆ ರಸ್ತೆಯ ಎರಡು ಬದಿಗಳು ಭಾರೀ ಆಳದಲ್ಲಿದ್ದು, (ಎಡ್ಜ್) ಇದನ್ನು ಸರಿಪಡಿಸಬೇಕಾಗಿರುವದು ತೀರಾ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ರಸ್ತೆ ಬದಿಯಲ್ಲಿನ ಈ ವ್ಯವಸ್ಥೆ ಅಪಾಯಕ್ಕೂ ಕಾರಣವಾಗುವ ಸಂಭವವಿದೆ. ಹಲವು ಅಡಿಗಳಷ್ಟು ಎತ್ತರಕ್ಕೆ ರಸ್ತೆಯ ಎರಡೂ ಬದಿಗಳನ್ನು ಸರಿಪಡಿಸಬೇಕಾಗಿದೆ.

ಈ ಕೆಲಸವನ್ನು ನಿರ್ವಹಿಸುವತ್ತಲೂ ಸಂಬಂಧಿಸಿದವರು ಕೂಡಲೇ ಗಮನ ಹರಿಸಬೇಕಾಗಿದೆ. ಪ್ರಸ್ತುತ ಉದ್ದೇಶಿತ ಕಾಮಗಾರಿಯಲ್ಲಿ ಇದು ಸೇರಿಲ್ಲದಿರುವದರಿಂದ ಇದರತ್ತ ಜನಪ್ರತಿನಿಧಿಗಳು, ಜಿಲ್ಲಾಡಳಿತ ನಿಗಾವಹಿಸಬೇಕಾಗಿದೆ.