ಕೊಡಗು ಜೆ.ಡಿ.ಎಸ್.: ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರಾದ ಯಾಲದಾಳು ಕುಸುಮಾ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮತ್ತು ಗೌರವ ತೋರಬೇಕೆಂದರು. ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಮಹಿಳೆಯರ ಸಂಕಷ್ಟಕ್ಕೆ ಸ್ಪಂದನ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಕನ್ನಡದ ಮೇಲಿನ ಅಭಿಮಾನವನ್ನು ನವೆಂಬರ್ ತಿಂಗಳಿಗೇ ಮಾತ್ರ ಸೀಮಿತಗೊಳಿಸದೆ ಪ್ರತಿದಿನ, ಪ್ರತಿಕ್ಷಣ ನಾಡು, ನುಡಿ, ಸಂಸ್ಕøತಿ, ಆಚಾರ, ವಿಚಾರದ ಬಗ್ಗೆ ಹೆಚ್ಚು ಕಾಳಜಿ ಮತ್ತು ಪ್ರೀತಿ ತೋರಬೇಕೆಂದರು.

ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಸುನಿಲ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರ ಮಹಿಳಾ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ಲಲಿತ, ನಗರ ಎಸ್.ಸಿ. ಘಟಕದ ಅಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡ ಪೃಥ್ವಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಮೂರ್ನಾಡು: ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶ್ರಮದಾನ ನಡೆಸಲಾಯಿತು. ಮೂರ್ನಾಡು ಕಿಗ್ಗಾಲು ಗ್ರಾಮದಲ್ಲಿರುವ ವಿಷ್ಣಪ್ಪ ದೇವಾಲಯದಲ್ಲಿ ಸಂಘದ ಸದಸ್ಯರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾಡುಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದರು. ಈ ಸಂದರ್ಭ ಗಜೇಂದ್ರ ಯುವಶಕ್ತಿ ಅಧ್ಯಕ್ಷ ಎಂ.ಜಿ. ವಿಶ್ವನಾಥ್, ಗ್ರಾಮಸ್ಥ ವಿಫನ್ ಸೋಮಯ್ಯ, ದೇವಾಲಯದ ಅರ್ಚಕ ಪ್ರಕಾಶ್ ಅವರು ಹಾಜರಿದ್ದರು.

ಸುಂಟಿಕೊಪ್ಪ ಕನ್ನಡ ವೃತ್ತ: ಕನ್ನಡ ಭಾಷೆ, ನಾಡಿಗಾಗಿ ಕನ್ನಡ ಹೋರಾಟಗಾರರ ಪರಿಶ್ರಮ ಆಗಾಧವಾಗಿದ್ದು ಎಲ್ಲಾ ಕ್ಷೇತ್ರದಲ್ಲಿರುವವರೂ ಕನ್ನಡ ಸೇವೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಗ್ರಾ.ಪಂ. ಆಡಳಿತಾಧಿಕಾರಿ ಕೆ.ಟಿ. ದರ್ಶನ್ ಕರೆ ನೀಡಿದರು.

ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್, ಗ್ರಾಮ ಪಂಚಾಯಿತಿ, ವಿವಿಧ ಸರಕಾರಿ ಇಲಾಖೆ ಹಾಗೂ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಕನ್ನಡ ಭಾಷೆ ಉಳಿಸಿ ಬೆಳವಣಿಗೆಗೆ ಶ್ರಮಿಸಬೇಕು. 1 ರಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರ್ಕಾರ ಅಸ್ತು ನೀಡಿದ್ದು ಸರಿಯಲ್ಲ ಎಂದೂ ಅವರು ಹೇಳಿದರು.

ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದೂ ಹೇಳಿದರು. ಸೋಮವಾರಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರಾಜ್ಯೋತ್ಸವ ಶುಭಾಶಯವನ್ನು ಶೈಲೇಂದ್ರ ಅವರು ನಾಡಿನ ಜನತೆಗೆ ಹೇಳಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀಶ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಅಂದಿನಿಂದ ಪ್ರಾಂತ್ಯವಾಗಿದ್ದ ರಾಜ್ಯಗಳ ಒಗ್ಗೂಡಿಕೆಗೆ ತ್ಯಾಗ ಮಾಡಿದವರ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಸುನಿಲ್, ತಾಲೂಕು ಸದಸ್ಯರಾದ ಡಿ. ನರಸಿಂಹ, ಪಿ.ಎಫ್. ಸಬಾಸ್ಟೀನ್, ಹೋಬಳಿ ಕಾರ್ಯದರ್ಶಿ ಸತೀಶ್ ಶೇಟ್, ನಿಕಟಪೂರ್ವ ಅಧ್ಯಕ್ಷ ವಹೀದ್ ಜಾನ್ ಸೇರಿದಂತೆ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಆದಿದ್ರಾವಿಡ ಸಮಾಜ ಸೇವಕ ಸಂಘ: ಕೊಡಗು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಕ ಸಂಘ ಹಾಗೂ ಸೂರಿಗಾಗಿ ಸಮಿತಿ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಳನ್ನು ಕಡಿದು, ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮವನ್ನು ಸಂಘದ ಗೌರವಧ್ಯಕ್ಷ ಪಿ.ಬಿ. ಬಾಬು ಉದ್ಘಾಟಿಸಿದರು.

ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸ್ವಚ್ಛತೆಗೆ ಆದ್ಯತೆ ನೀಡುವ ಅಗತ್ಯವಿದ್ದು, ಈ ಕುರಿತು ಎಲ್ಲರೂ ಗಂಭೀರ ಚಿಂತನೆ ಹರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಿ.ಎಲ್. ಸುರೇಶ್, ಸಿದ್ದಾಪುರ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಮಧು, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ರಮೇಶ್, ಪರಿಸರ ಪ್ರೇಮಿ ಅಣ್ಣು, ಎಸ್‍ಡಿಎಂಸಿ ಸದಸ್ಯ ಕೃಷ್ಣ, ಪ್ರೌಢಶಾಲೆಯ ಮುಖ್ಯ ಶಿಕ್ಷಕÀರಾದ ಡೈಸಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶೋಭ, ಬೋಧಕ ವರ್ಗ ಹಾಗೂ ಸಂಘದ ಸದಸ್ಯರು ಹಾಜರಿದ್ದರು.ಭಾರತಿ ವಿದ್ಯಾಸಂಸ್ಥೆ: ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಭೆ ಭಾವಚಿತ್ರಕ್ಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್, ಉಪ ಪ್ರಾಂಶುಪಾಲ ಪಿ.ಎನ್. ನರಸಿಂಹಮೂರ್ತಿ ಹಾಗೂ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಪುಷ್ಪಾರ್ಚನೆ ಮಾಡಿದರು.

ಸಭೆಯನ್ನು ಉದ್ದೇಶಿಸಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಿ.ಟಿ. ಸೋಮಶೇಖರ್ ಮಾತನಾಡಿ, ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಅಂದಿನಿಂದ ನವೆಂಬರ್ 1ನ್ನು ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.

ಸಭೆಯಲ್ಲಿ ಭಾರತಿ ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಮಹ್ಮದ್ ಪಾಶ, ಎನ್.ಕೆ. ಅಪ್ಪಸ್ವಾಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ, ಉಪಾಧ್ಯಕ್ಷ ಜಿ. ನಾರಾಯಣ ಸ್ವಾಮಿ, ಜಿ.ಟಿ. ಪರಮೇಶ್, ಸದಸ್ಯರುಗಳಾದ ಕೇಶವಮೂರ್ತಿ, ನರೇಶ್ಚಂದ್ರ, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈ.ಎಂ. ದಯಾನಂದ ಸ್ವಾಗತಿಸಿ, ವಂದಿಸಿದರು.

ಸುಂಟಿಕೊಪ್ಪ: ಕನ್ನಡ ರಾಜ್ಯೋತ್ಸವ ಅಂಗವಾಗಿ ಸುಭಾಷ್ ಯುವಕ ಸಂಘ, ಕಮಲ ನೆಹರು ಮಹಿಳಾ ಮಂಡಳಿ ಹಾಗೂ ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಯಿತು.

ಸುಭಾಷ್ ಯುವಕ ಸಂಘದ ಆವರಣದಲ್ಲಿ ಧ್ವಜಾರೋಹಣವನ್ನು ಗ್ರಾಮದ ಮಾಜಿ ಸೈನಿಕ ಯೂಸುಫ್ ನೆರವೇರಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಭಾಷ್ ಯುವಕ ಸಂಘದ ವತಿಯಿಂದ ಗ್ರಾಮದ ಯುವಕರಿಗೆ ರಂಗಸಮುದ್ರದಿಂದ ಕಂಬಿಬಾಣೆವರೆಗೆ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸೇವೆನಿರತ ಸೈನಿಕರಾದ ರವಿಕುಮಾರ್, ದ್ವಿತೀಯ ಸ್ಥಾನವನ್ನು ಕೆ.ಎನ್. ಸುಜನ್, ತೃತೀಯ ಸ್ಥಾನವನ್ನು ಮಂಜು ಎಸ್. ಹಾಗೂ ಪಿ.ಜೆ.ಜಗನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು ವಿಜೇತರಿಗೆ ನಗದು ಹಾಗೂ ಆಕರ್ಷಕ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಯುವಕ ಸಂಘದ ಅಧ್ಯಕ್ಷ ಮಧುಸೂಧನ್, ಮಾಜಿ ಅಧ್ಯಕ್ಷರಾದ ಲವಕುಮಾರ್, ನಿವೃತ್ತ ಸೈನಿಕರುಗಳಾದ ಯೂಸುಫ್, ಮಹೇಶ್, ಪ್ರಶಾಂತ್, ಪ್ರಶಸ್ತು ಸೇವಾ ನಿರತ ವೇಣುಗೋಪಾಲ್, ಕಮಲಾ ನೆಹರು ಮಹಿಳಾ ಮಂಡಳಿ ಪ್ರತಿನಿಧಿಗಳಾದ ಉಷಾ ಮುರುಳಿಧರ, ಟಿ.ಆರ್. ವೀಣಾ, ಶೋಭಾ ಸೋಮಯ್ಯ, ಮೀರಾ ಲವಕುಮಾರ್, ಸುಭಾಷ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಶನಿವಾರಸಂತೆ ಲಯನ್ಸ್ ಕ್ಲಬ್: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಲಯನ್ಸ್ ಕಚೇರಿ ಸಭಾಂಗಣದಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಭೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಲಯನ್ಸ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಆಚರಣೆ ಮಾಡಿದರೆ ಸಾಲದು, ಆಡಳಿತದಲ್ಲಿ ಹಾಗೂ ವ್ಯವಹಾರದಲ್ಲಿ ಕನ್ನಡಕ್ಕೆ ಆದ್ಯತೆ ಕೊಡುವುದರ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಮತ್ತು ಸರಕಾರದ ಸೌಲಭ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಕನ್ನಡಿಗರ ಹಿತವನ್ನು ಕಾಪಾಡಬೇಕು ಎಂದರು.

ಲಯನ್ಸ್ ಕ್ಲಬ್ ಉಪಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನವೆಂಬರ್ 1ನ್ನು ಕನ್ನಡ ಎಂದು ಹೇಳಿ, ನಾಳೆಗೆ ಕನ್ನಡವನ್ನು ಮರೆಯಬಾರದು. ಕನ್ನಡವನ್ನು ಪೂಜಿಸಿ, ನಮಸ್ಕರಿಸಬೇಕು ಎಂದರು.

ಸಭೆಯಲ್ಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷರುಗಳಾದ ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್, ಸದಸ್ಯರುಗಳಾದ ಸಿ.ಪಿ. ಹರೀಶ್, ಕೆ.ಎನ್. ಕಾರ್ಯಪ್ಪ, ಎಸ್.ಜಿ. ನರೇಶ್ಚಂದ್ರ, ಜಿ.ಪಿ. ಪುಟ್ಟಪ್ಪ, ಟಿ.ಆರ್. ಕೇಶವಮೂರ್ತಿ, ಭಾರತಿ ವಿದ್ಯಾಸಂಸ್ಥೆಯ ನಿರ್ದೇಶಕ ಮಹಮ್ಮದ್ ಪಾಶ ಉಪಸ್ಥಿತರಿದ್ದರು. ಬಿ.ಕೆ. ಚಿಣ್ಣಪ್ಪ ನಿರೂಪಿಸಿ, ಸ್ವಾಗತಿಸಿ, ಜಿ. ನಾರಾಯಣ ಸ್ವಾಮಿ ವಂದಿಸಿದರು.

ಸುಂಟಿಕೊಪ್ಪ ಪ.ಪೂ. ಕಾಲೇಜು: ಸುಂಟಿಕೊಪ್ಪದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿÀ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಭುವನೇಶ್ವರಿ ದೇವಿಗೆ ಪ್ರಾಂಶುಪಾಲ ಪಿ.ಎಸ್. ಜಾನ್ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಉಪನ್ಯಾಸಕರುಗಳಾದ ಡಾ. ಸುಕನ್ಯಾ, ಎಸ್.ಹೆಚ್. ಈಶ, ಫಿಲಿಫ್‍ವಾಸ್, ಕೆ. ಕವಿತಾ ಭಕ್ತ್, ಪದ್ಮಾವತಿ, ಜಯಶ್ರೀ, ಮಂಜುಳಾ, ಕವಿತ, ಕೆ.ಸಿ. ಕನಕ ಹಾಜರಿದ್ದರು.