ಗೋಣಿಕೊಪ್ಪಲು, ನ. 2 : ಸಾಕಾನೆ ಫೋಟೊ ತೆಗೆಯಲು ಹೋಗಿ ಆನೆಯಿಂದ ದಾಳಿಗೆ ಒಳಗಾಗುವ ವೇಳೆ ಸವಾರ ಬೈಕ್ ಬಿಟ್ಟು ಓಡಿಹೋಗಿ ಜೀವ ಉಳಿಸಿ ಕೊಂಡ ಘಟನೆ ಮತ್ತಿಗೋಡು ಸಾಕಾನೆ ಶಿಬಿರದ ರಾಜ್ಯ ಹೆದ್ದಾರಿ ಯಲ್ಲಿ ಭಾನುವಾರ ಸಂಜೆ ಜರುಗಿದೆ.ಬೈಕ್ನಲ್ಲಿ ಇಬ್ಬರು ಸವಾರರು ತಿತಿಮತಿ ಕಡೆಯಿಂದ ಹೆದ್ದಾರಿಯಲ್ಲಿ ಆನೆಚೌಕೂರಿನತ್ತ ತೆರಳುತ್ತಿದ್ದಾಗ ಭೀಮ ಎಂಬ ಸಾಕಾನೆ ಮತ್ತಿಗೋಡು ಶಿಬಿರದ ರಸ್ತೆ ಬದಿಯಲ್ಲಿ ನಿಂತಿದೆ. ಈ ವೇಳೆಯಲ್ಲಿ ಬೈಕ್ ಸವಾರರು ಆನೆಯ ಫೋಟೊ ತೆಗೆಯಲು ಮುಂದಾಗಿದ್ದಾರೆ. ಕೂಡಲೆ ಆನೆ ಕೆರಳಿ ಫೋಟೊ ತೆಗೆಯುವವರತ್ತ ಧಾಳಿಗೆ ಮುಂದಾಗಿದೆ. ಈ ವೇಳೆ ಬೈಕ್ ಅನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿದ ಸವಾರರು ಜೀವ ಉಳಿಸಿಕೊಂಡಿ ದ್ದಾರೆ. ಬೈಕ್ ಮಧ್ಯ ರಸ್ತೆಯಲ್ಲಿ ಬಿದ್ದಿದ್ದುದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಕೂಡಲೆ ಆನೆ ಮಾವುತರು ಸ್ಥಳಕ್ಕೆ ಬಂದು ಬೈಕ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೈಕ್ ಸವಾರರು ಯಾರೆಂದು ತಿಳಿದುಬಂದಿಲ್ಲ. ಎಷ್ಟು ಹೇಳಿದರೂ ಕೆಲವು ಪ್ರಯಾಣಿಕರು ಕೇಳುವುದಿಲ್ಲ. ಇಂತಹ ಅಪಾಯಗಳನ್ನು ತಾವೇ ತಂದುಕೊಳ್ಳುತ್ತಾರೆ ಎಂದು ಸಾಕಾನೆ ಶಿಬಿರದ ಆರ್ಎಫ್ಒ ಕಿರಣ್ ಕುಮಾರ್ ತಿಳಿಸಿದ್ದಾರೆ.
-ಎನ್.ಎನ್.ದಿನೇಶ್