ವೀರಾಜಪೇಟೆ, ನ. 2: ಹಾಸನ ಜಿಲ್ಲೆಯ ಅರಸಿಕೆರೆ ಗ್ರಾಮದ ಅರಸಿಕಟ್ಟೆ ಅಮ್ಮನ ದೇವಸ್ಥಾನದ ಬಳಿ ಕೊಣನೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಾಗರ್ ಹಾಗೂ ಇತರ ಐದು ಮಂದಿ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಸರಕಾರದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಕೊಣನೂರು ಪೊಲೀಸರು ವೀರಾಜಪೇಟೆಯ 9 ಮಂದಿಯನ್ನು ಬಂಧಿಸಿ ಅರಕಲಗೋಡಿನ ಪ್ರಿನ್ಸಿಪಾಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಎಲ್ಲರನ್ನು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿ ಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ತಾ. 30.10.2020 ರಂದು ಸಂಜೆ 5.30ರ ಸಮಯದಲ್ಲಿ ಅರಸಿಕಟ್ಟೆ ಅಮ್ಮನ ದೇವಾಲಯದ ಸಭಾಂಗಣ ದಲ್ಲಿ ಜೂಜಾಡುತ್ತಿದ್ದ ತಂಡವನ್ನು ಪೊಲೀಸ್ ಸಿಬ್ಬಂದಿಗಳು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೂಜಾಡುತ್ತಿದ್ದ ಕೆಲವರು ಪೊಲೀಸ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ದೂರಿನ ಮೇರೆ ಸ್ಥಳಕ್ಕೆ (ಮೊದಲ ಪುಟದಿಂದ) ಬಂದ ಎಸ್.ಐ. ಸಾಗರ್ ಮೇಲೆಯು ಇದೇ ತಂಡ ಹಲ್ಲೆ ನಡೆಸಿ ಗಾಯಗೊಳಿಸಿದರೆಂದು ಕೊಣನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ವಯಂ ದೂರು ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಕೊಣನೂರು ಬಳಿಯ ಅರಸಿಕಟ್ಟೆ ಅಮ್ಮನ ದೇವಾಲಯಕ್ಕೆ ಹರಕೆ ಪೂಜೆಯ ಸೇವೆಗಾಗಿ ವೀರಾಜಪೇಟೆಯಿಂದ ಒಟ್ಟು 21 ಮಂದಿ ತೆರಳಿದ್ದು, ಈ ಪೈಕಿ ಅಪ್ಪುಮೋಹನ್ ಅಲಿಯಾಸ್ ವಾಸು, ಬಿ.ಬಿ. ಜಯ ಅಲಿಯಾಸ್ ವಾಸು, ವಿ.ಎಸ್. ಕಿಶನ್, ಲೋಕೇಶ್ ಅಲಿಯಾಸ್ ಅಪ್ಪು, ಸತೀಶ್, ಜೀವನ್, ರಂಜು, ಎನ್.ಪಿ. ದಿನೇಶ್ ಹಾಗೂ ರಾಘವೇಂದ್ರ ಸೇರಿದಂತೆ 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.