ಪೆರಾಜೆ, ನ. 2: ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಪೆರಾಜೆ ಇದರ ವತಿಯಿಂದ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಯುಕ್ತ ಸ್ಥಾನೀಯ ಸಮಿತಿ ಮಟ್ಟದ ಪೂರ್ವಭಾವಿ ಸಭೆಯು ಗ್ರಾಮದ ಆಯಾಯ ವಾರ್ಡ್ ಮಟ್ಟದಲ್ಲಿ ವಾರ್ಡ್‍ನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು. ವಯನಾಟ್ ಕುಲವನ್ ಸಭಾಂಗಣದಲ್ಲಿ ನಡೆದ ಕೊನೆಯ ಹಂತದ ಸಭೆಯಲ್ಲಿ ವಾರ್ಡ್ ಅಧ್ಯಕ್ಷ ಅನಿಲ್ ಕುಂಬಳಚೇರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಪಂಚಾಯಿತಿ ಸದಸ್ಯ ಉದಯಚಂದ್ರ ಕುಂಬಳಚೇರಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸತತ 25 ವರ್ಷಗಳಿಂದ ಭಾಜಪ ಆಡಳಿತ ನಡೆಸುವ ಮೊದಲ ಗ್ರಾಮ ಪೆರಾಜೆ ಆಗಿದ್ದು ಇದರ ಜೊತೆಗೆ ಆಡಳಿತ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಯಶಸ್ವಿಯಾಗಿದೆ.
ಪ್ರಧಾನಿ ಕನಸಿನಂತೆ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಪಂಚಾಯತ್ ಸದಾ ಪ್ರಯತ್ನಿಸುತಿದೆ. ಗ್ರಾಮಸ್ಥರು ಮೂಲಭೂತ ಸೌಕರ್ಯಗಳಾದ ರಸ್ತೆ, ಮನೆ, ಕುಡಿಯುವ ನೀರು, ವಿದ್ಯುತ್ ಪೂರೈಕೆ ಜೊತೆಗೆ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೂ ಯೋಜನೆಗಳನ್ನು ತಲುಪಿಸುವಲ್ಲಿ ನಮ್ಮ ಪಂಚಾಯಿತಿ ಸಫಲವಾಗಿದ್ದು, ಇದರ ಹಿಂದೆ ನಮ್ಮ ಶಾಸಕ ಕೆ.ಜಿ. ಬೋಪಯ್ಯ ಕಾರ್ಯವನ್ನು ನೆನಪಿಸಿಕೊಂಡರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗಳನ್ನು ಮಾಡುವ ಹೊಣೆಗಾರಿಕೆ ಮುಂದಿನ ಅಭ್ಯರ್ಥಿಗಳ ಮೇಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಜಪ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಪ್ರಧಾನ ಕಾರ್ಯದರ್ಶಿ ಧನಂಜಯ ಕೋಡಿ, ಭಾಜಪ ಶಕ್ತಿ ಕೇಂದ್ರದ ಸಹ ಪ್ರಮುಖ್ ಚಿನ್ನಪ್ಪ ಅಡ್ಕ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ತಾ. ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಮಡಿಕೇರಿ ತಾ.ಬಿಜೆಪಿ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಮಹೇಶ ಮೂಲೆಮಜಲು, ಜಿಲ್ಲಾ ಸಲಹಾ ಸಮಿತಿ ಸದಸ್ಯ ಅಮೆಚೂರು ಹೊನ್ನಪ್ಪ ಊರಿನ ಹಿರಿಯರಾದ ಗಣಪತಿ ಕುಂಬಳಚೇರಿ ಸೇರಿದಂತೆ ಮಾಜಿ ಚುನಾಯಿತ ಪ್ರತಿನಿಧಿಗಳು, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ಹಿರಿಯ ನಾಯಕರುಗಳು, ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.